ಬೆಂಗಳೂರು: ‘ರೈತರ ಪರವಾಗಿ ಮಾತನಾಡಿದ ರಾಕೇಶ್ ಟಿಕಾಯತ್ ಅವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ನಾವಿದನ್ನು ಪ್ರತಿಭಟಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ರೈತರ ಪರವಾಗಿ ನಮ್ಮ ಪಕ್ಷದ ಬೆಂಬಲ ಸದಾ ಇರುತ್ತದೆ. ಬಿಜೆಪಿ ನಾಯಕರೇ ಕೊರೋನಾ ಹಾಗೂ ಬೇರೆ ಸಂದರ್ಭಗಳಲ್ಲಿ ಯಾವ ರೀತಿ ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ನೋಡಿದ್ದೇವೆ. ಆಗ ಯಾರ ಮೇಲೂ ಪ್ರಕರಣ ದಾಖಲಿಸಲಿಲ್ಲ. ಈಗ ರೈತರ ಪರವಾಗಿ ಮಾತನಾಡಿದ ರಾಕೇಶ್ ಟಿಕಾಯತ್ ಅವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ನಾವಿದನ್ನು ಪ್ರತಿಭಟಿಸಬೇಕು. ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಇರಬೇಕು. ಸರ್ಕಾರ ಹೋರಾಟಗಾರರನ್ನು ಕುಗ್ಗಿಸಲು ಈ ರೀತಿ ಮಾಡಬಾರದು’ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ನಾನು, ಸಿದ್ದರಾಮಯ್ಯನವರು ಇರುತ್ತೇವೆ:
ಭಾನುವಾರ ಸಂಜೆ ಬೆಳಗಾವಿಗೆ ತೆರಳುತ್ತಿದ್ದೇನೆ. ಸೋಮವಾರ ಬೆಳಗ್ಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರು ಆಗಮಿಸಲಿದ್ದಾರೆ. ನಾವಿಬ್ಬರೂ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು, ಅಲ್ಲಿಂದ ಮಸ್ಕಿಗೆ ತೆರಳಲಿದ್ದೇವೆ. ಮರುದಿನ ಬಸವಕಲ್ಯಾಣಕ್ಕೆ ತೆರಳುತ್ತೇವೆ.
ಭಾನುವಾರ ಹೋಗಿ ಅಲ್ಲಿನ ಉಸ್ತುವಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಜವಾಬ್ದಾರಿ ಹಂಚುತ್ತೇನೆ. ಎಲ್ಲ ನಾಮಪತ್ರ ಸಂದರ್ಭದಲ್ಲೂ ನಾವು ಇರುತ್ತೇವೆ. ಯಾರಿಗೆ ಉಸ್ತುವಾರಿ ನೀಡಿದ್ದೇವೊ ಅವರೆಲ್ಲರೂ ಅ ಸಂದರ್ಭದಲ್ಲಿ ಅಲ್ಲಲ್ಲಿ ಹಾಜರಿರಬೇಕು ಎಂದು ತಿಳಿಸಿದ್ದೇವೆ.
ಕಿವಿಯಲ್ಲಿ ಕೇಳುವುದು ಸುಳ್ಳು, ಕಣ್ಣಲ್ಲಿ ನೋಡುವುದು ಸತ್ಯ:
ರಾಮನಗರಕ್ಕೆ ಕೊಡುಗೆ ನೀಡಿರುವ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಹುಡುಗರುಗಳು ಏನೋ ಮಾತನಾಡುತ್ತಾರೆ ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳಲು ಆಗುತ್ತಾ. ನಾವೇನು ಮಾಡಿದ್ದೇವೆ ಅಂತಾ ಜನ ನೋಡಿದ್ದಾರೆ. ಸತ್ಯ ಹಾಗೂ ಸುಳ್ಳಿಗೂ ವ್ಯತ್ಯಾಸ ಇದೆ. ಕಿವಿಯಲ್ಲಿ ಕೇಳುವುದು ಸುಳ್ಳು, ಕಣ್ಣಾರೆ ನೋಡುವುದೇ ಸತ್ಯ. ನಾನು ಕೆಲಸ ಮಾಡಿದ್ದೇನೋ ಇಲ್ಲವೋ ಎಂಬುದನ್ನು ನಮ್ಮ ಜನತೆ ಗುರುತಿಸುತ್ತಾರೆ. ನಾನ್ಯಾಕೆ ಹುಡುಗರ ಬಗ್ಗೆ ಮಾತನಾಡಲಿ, ನಾನು ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ.

ವರದಿ: ಸಿಸಿಲ್ ಸೋಮನ್

