ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಭಾನುವಾರದಿಂದ ಮಾರುಕಟ್ಟೆಯಲ್ಲಿ ಅಂಗಡಿಗಳು ಮತ್ತೆ ತೆರೆದುಕೊಂಡಿವೆ.
ಅಂಗಡಿ ಮಾಲೀಕರ ಪರವಾನಗಿ ಪರಿಶೀಲಿಸಿ, ಅರ್ಹರಿಗೆ ಮಹಾನಗರ ಪಾಲಿಕೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ.
ಸೆಂಟ್ರಲ್ ಮಾರುಕಟ್ಟೆ ಕಟ್ಟಡದ ಹೊರ ಆವರಣದಲ್ಲಿ ಪಾತ್ರೆ, ತರಕಾರಿ, ಹಣ್ಣು, ಪ್ಲಾಸ್ಟಿಕ್ ಸಾಮಗ್ರಿ ಮೊದಲಾದ 25ಕ್ಕೂ ಅಧಿಕ ಅಂಗಡಿಗಳು ಆರಂಭಗೊಂಡಿವೆ. ಒಳಗಡೆ ಅಂಗಡಿಗಳ ಬಾಗಿಲು ತೆರೆದಿಲ್ಲ. ಮಾರುಕಟ್ಟೆ ಪ್ರವೇಶದ ಗೇಟ್‌ಗಳಿಗೆ ಅಳವಡಿಸಿದ್ದ ಬೀಗಗಳನ್ನು ತೆಗೆಯಲಾಗಿಲ್ಲ. ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದರಿಂದ ಜನರೇಟರ್ ಬಳಸಿ ವ್ಯಾಪಾರ ಮಾಡುತ್ತಿದ್ದಾರೆ. ಶೌಚಗೃಹ ಮಾರುಕಟ್ಟೆ ಒಳಗಡೆ ಇರುವುದರಿಂದ ವ್ಯಾಪಾರಿಗಳಿಗೆ ತೊಂದರೆಯಾಗಿದೆ.
ಆರು ತಿಂಗಳಿಂದ ಅಂಗಡಿಗಳು ಬಂದ್ ಆಗಿರುವ ಕಾರಣ ಅಲ್ಲಿದ್ದ ಕೆಲವು ವಸ್ತುಗಳು ಹಾಳಾಗಿವೆ. ಮಳೆಗಾಲವಾದ ಕಾರಣ ಫಂಗಸ್ ಬಂದಿದ್ದು, ಮಾರಾಟಕ್ಕೆ ಯೋಗ್ಯವಾಗಿಲ್ಲ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆ ಒಳಗಿನ ವ್ಯಾಪಾರಿಗಳಿಗೂ ಗೇಟ್ ತೆರೆದು ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಲಿದ್ದೇವೆ ಎಂದು ವ್ಯಾಪಾರಸ್ಥರ ಸಂಘದ ಹಂಗಾಮಿ ಅಧ್ಯಕ್ಷ ಹಸನ್ ತಿಳಿಸಿದ್ದಾರೆ.
