ಬೆಂಗಳೂರು, ಸೆ.29- ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ದೇಶಾದ್ಯಂತ 56 ವಿಧಾನಸಭಾ ಕ್ಷೇತ್ರಗಳು ಮತ್ತು ಬಿಹಾರದ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯನ್ನು ಘೋಷಣೆ ಮಾಡಿರುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರಕ್ಕೆ ಅಕ್ಟೋಬರ್ 9ರಿಂದ ಅಸೂಚನೆ ಜಾರಿಯಾಗಲಿದ್ದು, ಅ.16ಕ್ಕೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಅ.17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 19ಕ್ಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ನವೆಂಬರ್ 3ರಂದು ಮತದಾನ ನಡೆಯಲಿದ್ದು, ನ.10ರಂದು ಮತ ಎಣಿಕೆ ನಡೆಯಲಿದೆ. ನ.12ಕ್ಕೆ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.
ಕೋವಿಡ್ ಸಂದರ್ಭದಲ್ಲಿ ಪಾಲನೆ ಮಾಡಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚುನಾವಣೆ ನಡೆಸಬೇಕು. ಮತದಾರರ ಪಟ್ಟಿಯನ್ನು ಮತ್ತು ಚುನಾವಣೆ ನಡೆಸಲು ಅಗತ್ಯವಾದಷ್ಟು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕೆಂದು ಆಯೋಗ ಸೂಚನೆ ನೀಡಿದೆ.
ಕರ್ನಾಟಕ ವಿಧಾನಸಭೆಯ 224 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ತೆರವಾಗಿವೆ. ಶಾಸಕರ ರಾಜೀನಾಮೆಯಿಂದಾಗಿ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳು ಖಾಲಿಯಾಗಿದ್ದವು.
ಶಾಸಕರ ಅಕಾಲಿಕ ನಿಧನದಿಂದ ಶಿರಾ ಮತ್ತು ಬಸವ ಕಲ್ಯಾಣ ಕ್ಷೇತ್ರಗಳು ಖಾಲಿ ಉಳಿದಿವೆ. ಬಸವ ಕಲ್ಯಾಣ ಮತ್ತು ಮಸ್ಕಿ ಹೊರತುಪಡಿಸಿ ಉಳಿದೆರಡು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಸ್ರ್ಪಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಕೂಡ ತೆರವಾಗಿದೆ.
