ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಪ್ರಾಥಮಿಕ ವರದಿಯನ್ನು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಸ್ವೀಕರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ನಾರ್ಕೊ ಮತ್ತು ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.
ಎಸ್‌ಐಟಿಯ ವರದಿಯನ್ನು ಪಡೆದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣದಲ್ಲಿ ನಿರ್ದಯತೆ ಮತ್ತು ಕಳಪೆ ಮೇಲ್ವಿಚಾರಣೆಗಾಗಿ ಹತ್ರಾಸ್ ಎಸ್‌ಪಿ ವಿಕ್ರಾಂತ್ ವೀರ್ ಅವರನ್ನು ಅಮಾನತುಗೊಳಿಸಿದರು. ಹಳ್ಳಿಯಲ್ಲಿ ನಡೆದ 19 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಸರ್ಕಲ್ ಅಧಿಕಾರಿ ರಾಮ್ ಶಾಬ್, ಇನ್ಸ್‌ಪೆಕ್ಟರ್ ದಿನೇಶ್ ಮೀನಾ, ಸಬ್ ಇನ್ಸ್‌ಪೆಕ್ಟರ್ ಜಗ್ವೀರ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೆಬಲ್ ಮಹೇಶ್ ಪಾಲ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಶಾಮ್ಲಿ ಜಿಲ್ಲೆಯ ಎಸ್‌ಪಿ ವಿನೀತ್ ಜೈಸ್ವಾಲ್ ಅವರಿಗೆ ಎಸ್‌ಪಿ ಹತ್ರಾಸ್ ಉಸ್ತುವಾರಿ ನೀಡಲಾಗಿದೆ.
ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಿಳೆಯರ ಗೌರವಕ್ಕೆ ಧಕ್ಕೆ ತರುವವರಿಗೆ ಸರಿಯಾದ ಶಿಕ್ಷೆಯನ್ನು ನೀಡಲಾಗುವುದು ಅದು ಭವಿಷ್ಯಕ್ಕೆ ಒಂದು ಉದಾಹರಣೆಯಾಗಲಿದೆ ಎಂದು ಹೇಳಿದ್ದಾರೆ. ಯುಪಿ ಯಲ್ಲಿ ತಾಯಂದಿರು ಮತ್ತು ಸಹೋದರಿಯರ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವ ಬಗ್ಗೆ ಯೋಚಿಸುವವರ ವಿನಾಶ ನಿಶ್ಚಿತ, ಮತ್ತು ಅವರ ಸರ್ಕಾರ ರಾಜ್ಯದ ಮಹಿಳೆಯರ ಸುರಕ್ಷತೆಗಾಗಿ ಬದ್ಧವಾಗಿದೆ ಎಂದು, ಸಿಎಂ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
