ಬೆಂಗಳೂರು: ತಾಂತ್ರಿಕ ಸಮಿತಿ ಸಲಹೆಯಂತೆ ನಿರ್ಧಾರ ಕೈಗೊಳ್ಳಬೇಕು ಎಂದು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ. ಮಾಧ್ಯಮಗಳ ವರದಿ ಪ್ರಕಾರ ಸರ್ಕಾರಕ್ಕೆ ಲಾಕ್ ಡೌನ್ ಬಗ್ಗೆ ಆಸಕ್ತಿ ಇತ್ತು ಅನಿಸುತ್ತದೆ. ಆದರೆ ನಿನ್ನೆ ಪ್ರಧಾನಮಂತ್ರಿಗಳ ಸಂದೇಶ ಮೇರೆಗೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ.
ಸರ್ಕಾರ ಈಗ ಮಾರ್ಗಸೂಚಿ ಹೊರಡಿಸಿದ್ದು, ಎಲ್ಲ ವರ್ಗದ ಜನ ಈಗ ಸಹಕಾರ ನೀಡಬೇಕಾದ ಅವಶ್ಯಕತೆ ಇದೆ. ಸರ್ಕಾರದ ವೈಫಲ್ಯದ ಬಗ್ಗೆ ರಾಜ್ಯಪಾಲರ ಸಭೆಯಲ್ಲಿ ಹೇಳಿದ್ದೇವೆ. ವಿವರವಾಗಿ ಹೇಳಲು ಸಾಧ್ಯವಾಗದಿದ್ದರೂ ಕಳೆದ ಒಂದು ವರ್ಷದಿಂದ ಸರ್ಕಾರದ ವೈಫಲ್ಯ ತಿಳಿಸಿದ್ದೇವೆ. ಅವರು ಈ ವಿಚಾರದಲ್ಲಿ ವಿಫಲರಾಗಿದ್ದಾರೆ ಎಂಬುದಕ್ಕೆ ಸೋಂಕಿನ ಸಂಖ್ಯೆಗಳೇ ಸಾಕ್ಷಿ.
ನಿನ್ನೆ ಪ್ರಧಾನಮಂತ್ರಿಗಳ ಭಾಷಣವನ್ನು ಖರ್ಗೆ ಸಾಹೇಬರು ಪ್ರವಚನ ಎಂದು ಹೇಳಿದ್ದಾರೆ. ನಿನ್ನೆ ಪ್ರಧಾನಮಂತ್ರಿಗಳು ಲಸಿಕೆ ವಿಚಾರವಾಗಿ ಹೇಳಿದ ತೀರ್ಮಾನಗಳನ್ನು ಯಾಕೆ ಮುಂಚಿತವಾಗಿ ಮಾಡಿರಲಿಲ್ಲ? ಇದೆಲ್ಲವೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಸಾಬೀತುಪಡಿಸುತ್ತಿವೆ.
ಪರಿಸ್ಥಿತಿ ಕೈತಪ್ಪಿದಾಗ ಲಸಿಕೆ ಹೆಚ್ಚಿನ ಉತ್ಪಾದನೆಗೆ ಅವಕಾಶ ಕೊಟ್ಟಿದ್ದೇನೆ, ತೆರಿಗೆ ವಿನಾಯಿತಿ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿ ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವ ಬದಲು, ನಿಮಗೆ ಮತ ಹಾಕಿ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದ ಜನರಿಗೆ ಔಷಧಿ ನೀಡಬಹುದಿತ್ತು. ತಮ್ಮ ದೊಡ್ಡಸ್ಥಿಕೆ ತೋರಿಸಿಕೊಳ್ಳಲು ಲಸಿಕೆಗಳನ್ನು ಬೇರೆ ದೇಶಗಳಿಗೆ ಹಂಚಿದ್ದಾರೆ.
ಸರ್ಕಾರ ಮೊದಲು ದೇಶದ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಇಷ್ಟು ದಿನಗಳಿಂದ ಆರೋಗ್ಯ, ಕಂದಾಯ ಹಾಗೂ ಗೃಹ ಸಚಿವರು ಮಾತನಾಡುತ್ತಿದ್ದರು. ಈಗ ಜನರ ಆಕ್ರೋಶಕ್ಕೆ ಮುಖ್ಯಕಾರ್ಯದರ್ಶಿಗಳ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಇದು ಸರ್ಕಾರ ವಿಫಲವಾಗಿದೆ ಎಂಬುದನ್ನು ತೋರಿಸುತ್ತದೆ.
ರಾಜ್ಯದಲ್ಲಿ ಈಗ ರಾಜ್ಯಪಾಲರ ಆಳ್ವಿಕೆ ಇದೆ. ರಾಜ್ಯಪಾಲರ ಬಗ್ಗೆ ನಮಗೆ ಗೌರವ ಇದೆ. ಆದರೆ ಇದು ಸಂವಿಧಾನದ ವಿಚಾರ. ಇವತ್ತು ಇಲ್ಲಿ ಆಗಿದೆ, ನಾಳೆ ಬೇರೆ ಕಡೆಯಲ್ಲಿ ಆಗಬಹುದು. ಅವರು ಪ್ರಧಾನಮಂತ್ರಿಗಳು ಹೇಳಿದ ತಕ್ಷಣ ಸಂವಿಧಾನ ಬದಲಿಸಿಸಭೆ ಮಾಡಬಹುದಾ. ಸಂವಧಾನ ಬದಲಾವಣೆ ಮಾಡಿ ನಮ್ಮ ರಾಜ್ಯವನ್ನು ದೆಹಲಿ, ಪುದುಚೆರಿ ರೀತಿ ಕೇಂದ್ರಾಡಳಿತ ಪ್ರದೇಶ ಮಾಡಲಿ.
ಡಬಲ್ ಇಂಜಿನ್ ಸರ್ಕಾರದಲ್ಲಿ ಏನಾಗುತ್ತಿದೆ. ಔಷಧಿ ತಯಾರಿಕೆಗೆ ಎಲ್ಲರಿಗೂ ಅವಕಾಶ ಕೊಟ್ಟು ನೀವೇ ಪರಿಶೀಲಿಸಿದ್ದರೆ ಏನಾಗುತ್ತಿತ್ತು? ನಮ್ಮ ರಾಜ್ಯದಲ್ಲೇ ನವೆಂಬರ್ 20ರಂದು ಮುನ್ನಚ್ಚರಿಕೆ ನೀಡಲಾಗಿದ್ದರೂ ಯಾಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದು ಕರ್ನಾಟಕ ಸರ್ಕಾರದ ವೈಫಲ್ಯ.
ರಾಜ್ಯದಲ್ಲಿ ಮೊದಲ ಲಸಿಕೆ ಹಾಕಿಸಿಕೊಂಡವರಿಗೆ ಎರಡನೇ ಲಸಿಕೆ ನೀಡಿಲ್ಲ. ಪ್ರಧಾನಿಗಳು ಭಾಷಣ ಮಾಡಿ ಎಲ್ಲವನ್ನು ಮಾಡಿದ್ದೇವೆ ಎನ್ನುತ್ತಾರೆ. ಈಗಲೂ ನಮಗೆ ಹಾಸಿಗೆ, ಆಕ್ಸಿಜನ್ ಬೇಕು ಅಂತಾ ನೂರಾರು ಕರೆ ಬರುತ್ತಿದೆ. ಮಾಧ್ಯಮಗಳು ಕೂಡ ಜನರಲ್ಲಿ ಭಯ ಹುಟ್ಟಿಸುವುದು ಬೇಡ. ನೀವು ವಾಸ್ತವದ ಸ್ಥಿತಿ ತೋರಿಸುತ್ತಿದ್ದೀರಿ, ಅದರ ಜತೆಗೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿ.
ಇವತ್ತು ಪ್ರಿಯಾಂಕ ಗಾಂಧಿ ಅವರು ಹೇಳಿರುವ ಮಾತು ಅರ್ಥಗರ್ಭಿತವಾಗಿದೆ. ಉತ್ತರ ಪ್ರದೇಶ ವಿಚಾರವಾಗಿ ಮಾತನಾಡುತ್ತಾ, ಜನ ಅಳುತ್ತಿರುವ ಸಮಯದಲ್ಲಿ ಪಶ್ಚಿಮ ಬಂಗಾಳದ ಚುನಾವಣೆ ಸಮಾವೇಷದಲ್ಲಿ ನಗುತ್ತಿದ್ದೀರಿ ಎಂದು ಟೀಕಿಸಿದ್ದಾರೆ.
ಇದು ಬೇಜವಾಬ್ದಾರಿ ಸರ್ಕಾರ. ಈ ಸಮಯದಲ್ಲಿ ಚುನಾವಣೆಗೆ ಏನು ತಯಾರಿ ಮಾಡಿಕೊಳ್ಲುತ್ತಿದ್ದಾರೆ. 6 ತಿಂಗಳ ಕಾಲ ಅವರ ಅಧಿಕಾರ ಅವಧಿ ವಿಸ್ತರಣೆ ಮಾಡಿ ಸುಗ್ರೀವಾಜ್ಞೆ ತರಲು ಸಾಧ್ಯವಿಲ್ಲವೇ? ಯಾವುದಾದರೂ ಜಿಲ್ಲಾ ಸಚಿವರು, ಆಸ್ಪತ್ರೆಯಲ್ಲಿ ವ್ಯವಸ್ಥೆ, ರೋಗಿಗಳ ಸ್ಥಿತಿ ಪರಿಶೀಲಿಸಿದ್ದಾರಾ? ಇಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಬಳಸಿಕೊಳ್ಳಿ. ಅವರಿಗೆ ಆಡಳಿತ ವ್ಯವಸ್ಥೆ ನಿಭಾಯಿಸಲು ಗೊತ್ತಿಲ್ಲ. ಯಾರಾದರೂ 6 ತಿಂಗಳಿಗೊಮ್ಮೆ ಅಧಿಕಾರಗಳನ್ನು ವರ್ಗಾವಣೆ ಮಾಡ್ತಾರಾ? ಸರ್ಕಾರವೇ ಜನರಿಗೆ ಈ ಕಾಯಿಲೆ ಅಂಟಿಸುತ್ತಿದ್ದಾರೆ. ಜನರಿಗೆ ಸಾಂತ್ವಾನ ಹೇಳಿ, ಆರ್ಥಿಕ ಶಕ್ತಿ ನೀಡಿ, ಆರೋಗ್ಯ, ಎಲ್ಲ ಕುಟುಂಬದವರಿಗೂ ರಕ್ಷಣೆ ನೀಡಬೇಕು.
ಮೃತರಾದವರು ಯಾವ ಕಾರಣದಿಂದ ಸತ್ತರು ಎಂಬುದರ ಬಗ್ಗೆ ಒಂದು ಆಡಿಟ್ ಮಾಡಿಸಿ. ಅಷ್ಟು ಮಾನವೀಯತೆ ಇಲ್ಲ ಅಂದ್ರೆ ಹೇಗೆ? ಸತ್ತವರಿಗೆ ಹೊರವಲಯದಲ್ಲಿ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸಕಾರಕ್ಕೆ ಅವಕಾಶ ಕಲ್ಪಿಸಿಕೊಡಬಹುದು. ಹಾಗೆ ಮಾಡಿದರೆ ಅವರು ತಮ್ಮ ಸಂಬಂಧಿಕರಿಗೆ ಅಂತಿಮ ಗೌರವ ಕೊಟ್ಟು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಅದನ್ನು ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ನಮ್ಮ ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ಅವರ ವಿಚಾರವನ್ನೇ ನಾನು ಉದಾಹರಣೆ ಕೊಟ್ಟು ಹೇಳುತ್ತಿದ್ದೇನೆ. ಚುನಾವಣೆ ಸಮಯ ಎಂದು ಆ ವಿಚಾರ ಮಾತನಾಡಿರಲಿಲ್ಲ. ಅವರು ಮೃತಪಟ್ಟಾಗ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ತರಲು ಆಗಲಿಲ್ಲ. ರಾಜಕೀಯ ಆಗಬಾರದು ಅಂತಾ ನಾನು ಈ ಬಗ್ಗೆ ಮಾತನಾಡಲಿಲ್ಲ. ಇದು ಈ ಸರ್ಕಾರ.

ವರದಿ: ಸಿಸಿಲ್ ಸೋಮನ್

