ಬೆಂಗಳೂರು: ಉಮೇಶ್ ಕತ್ತಿ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ – ಸಿಎಂಗೆ ಡಿ.ಕೆ. ಶಿವಕುಮಾರ್ ಆಗ್ರಹ.

ಸರ್ಕಾರದಿಂದ ಬರುತ್ತಿದ್ದ 5 ಕೆ.ಜಿ ಅಕ್ಕಿಯನ್ನು 2 ಕೆ.ಜಿಗೆ ಇಳಿಸಿದ್ದನ್ನು ಪ್ರಶ್ನಿಸಿದ ಸಾಮಾನ್ಯ ವ್ಯಕ್ತಿಗೆ, ಸತ್ತರೆ ಸಾಯಿ ಎಂದ ಆಹಾರ ಸಚಿವ ಉಮೇಶ್ ಕತ್ತಿ ತಕ್ಷಣ ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ನಿನ್ನೆ ನಡೆದ ಸಭೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಈ ಕೊರೋನಾ ಸಂಕಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಜನರಿಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಸರ್ಕಾರ ಜನರಿಗೆ ಮಾಸಿಕ ತಲಾ 10 ಕೆ.ಜಿ. ಅಕ್ಕಿ ನೀಡಬೇಕು, ಲಾಕ್ ಡೌನ್ ನಿಂದ ಆರ್ಥಿಕ ನಷ್ಟ ಎದುರಿಸುತ್ತಿರುವವರಿಗೆ ಪರಿಹಾರದ ಪ್ಯಾಕೇಜ್ ನೀಡಬೇಕು, ಎಲ್ಲ ತರದ ಕಂದಾಯ, ಬಡ್ಡಿಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ.
ಇಂತಹ ಸಮಯದಲ್ಲಿ ಬಡ ರೈತನೊಬ್ಬ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಿಗೆ ಕರೆ ಮಾಡಿ, ನಾವು ಬದುಕಬೇಕಾ? ಸಾಯಬೇಕಾ ಎಂದು ಕೇಳಿದರೆ, ಹೋಗಿ ಸಾಯಿರಿ ಎಂದು ಮಂತ್ರಿ ಹೇಳುತ್ತಾರೆ. ಈ ಮಾತು ಕೇವಲ ಉಮೇಶ್ ಕತ್ತಿ ಅವರದಲ್ಲ. ಕರ್ನಾಟಕ ಸರ್ಕಾರದ ಮಾತು.
ಇದು ಬಿಜೆಪಿ ಸಂಸ್ಕೃತಿ. ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಉತ್ತರ ಕೊಡಿ ಎಂದು ಯಾವ ಮಂತ್ರಿಗೂ ಕೇಳುವುದಿಲ್ಲ. ಅವರೆಲ್ಲರ ಧೋರಣೆಯ ಪ್ರತಿಫಲವೇ ಇದು. ಅಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆ ಇಲ್ಲ. ಇದಕ್ಕೆ ಮುಖ್ಯಮಂತ್ರಿಗಳು, ನಳೀನ್ ಕುಮಾರ್ ಕಟೀಲ್ ಸೇರಿ ಬಿಜೆಪಿ ಮುಖಂಡರು ಉತ್ತರಿಸಬೇಕು. ಇದ್ಯಾವ ಸಂಸ್ಕೃತಿ? 7 ಕೆ.ಜಿ ಅಕ್ಕಿ ಕಡಿತ ಮಾಡಿದರೆ, ಜನ ಅಧಿಕಾರದಲ್ಲಿರುವವರನ್ನೇ ಕೇಳುತ್ತಾರೆ, ಅಧಿಕಾರದಲ್ಲಿಲ್ಲದವರನ್ನು ಅಲ್ಲ. ನಮ್ಮನ್ನು, ನಿಮ್ಮನ್ನು ಯಾರೂ ಕೇಳುವುದಿಲ್ಲ. ಅಧಿಕಾರದಲ್ಲಿ ಇರುವವರನ್ನು ಜನ ಕೇಳುತ್ತಾರೆ.
ಕಾಂಗ್ರೆಸ್ ಸರ್ಕಾರ 7 ಕೆ.ಜಿ ಅಕ್ಕಿ ನೀಡುತ್ತಿತ್ತು. ಅದನ್ನು ಮೊದಲು 5 ಕೆ.ಜಿಗೆ ಇಳಿಸಿದಿರಿ, ಈಗ 2 ಕೆ.ಜಿಗೆ ಇಳಿಸಿದ್ದೀರಿ. ಜನ ಅಕ್ಕಿ ಕೇಳಿದ್ದಕ್ಕೂ ಮಂತ್ರಿಯಾದವರು, ನೀನು ಸತ್ತರೆ ಸಾಯಿ ಅಂತಾರೆ ಅಂದ್ರೆ ಯಾಕೆ ಇವರೆಲ್ಲಾ ಮಂತ್ರಿಯಾಗಿರಬೇಕು.
ಈ ಕೂಡಲೇ ಕತ್ತಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಬೇಕು. ಕ್ಷಮೆ ಕೇಳುವುದೆಲ್ಲ ಬೇಡ. ರಾಜ್ಯದ 6 ಕೋಟಿ ಜನರ ಪೈಕಿ ನಾಲ್ಕೂವರೆ ಕೋಟಿ ಜನರಿಗೆ ನಾವು ಅಕ್ಕಿ ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳಿಗೆ ಇವರ ಬಗ್ಗೆ ಕಾಳಜಿ ಇದ್ದರೆ, ಮಂತ್ರಿ ಸ್ಥಾನದಿಂದ ಕತ್ತಿ ಅವರನ್ನು ಕಿತ್ತು ಹಾಕಲಿ. ಈ ಪರಿಸ್ಥಿತಿಗೆ ಸರಕಾರವೇ ಕಾರಣ. ದಿನಬೆಳಗಾದರೆ ಜನ ರಾಜಕಾರಣಿಗಳು ಅಂತಾ ನಿಮಗೆ ಮಾತ್ರ ಬಯ್ಯುತ್ತಿಲ್ಲ. ನಮಗೂ ಸೇರಿಸಿ ಬಯ್ಯುತ್ತಿದ್ದಾರೆ. ಅಧಿಕಾರಿಗಳನ್ನು ಬಯ್ಯುತ್ತಿದ್ದಾರೆ. ಇದಕ್ಕೆಲ್ಲ ನೀವೇ ಕಾರಣ.
ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದೀರಿ. ನಿಮ್ಮ ಕೈಯಲ್ಲಿ ಆಗುವುದೂ ಇಲ್ಲ. ಮೊದಲು ಅಧಿಕಾರ ಬಿಟ್ಟು ಹೋಗಿ. ಕತ್ತಿ ಅವರದು ಉಡಾಫೆ ಮಾತಲ್ಲ. ಅದು ಹೊಣೆಗಾರಿಕೆ ಪ್ರಶ್ನೆ. ಯಡಿಯೂರಪ್ಪನವರೇ ನಿಮಗೆ ಅಧಿಕಾರವೇ ಮುಖ್ಯವೇ? ರಾಜಕೀಯ ಜೀವನದ ಕೊನೆ ದಿನಗಳಲ್ಲಿ ಉತ್ತಮ ಆಡಳಿತ ನೀಡಿ ಒಳ್ಳೆಯ ಬೀಳ್ಕೊಡುಗೆ ಪಡೆಯಬೇಕಾದರೆ, ಸೂಕ್ತ ಕ್ರಮ ಕೈಗೊಳ್ಳಿ. ಅಧಿಕಾರ ಶಾಶ್ವತ ಅಲ್ಲ. ಇವತ್ತು ಇರುತ್ತದೆ, ನಾಳೆ ಹೋಗುತ್ತದೆ. ಅಧಿಕಾರದಲ್ಲಿ ಇದ್ದಾಗ ನೀವು ಯಾವ ಪವಿತ್ರವಾದ ಕೆಲಸ ಮಾಡಿದಿರಿ ಅನ್ನೋದು ಮುಖ್ಯ. ನೀವು ಇನ್ನೆಷ್ಟು ದಿನ ಅಧಿಕಾರದಲ್ಲಿ ಇರುತ್ತೀರೋ? ನಾನು ಜನರ ಪರ ನಿಂತಿದ್ದೆ, ನೊಂದ ಜನರಿಗೆ ನೆರವಾಗದವರನ್ನು ಕಿತ್ತು ಬಿಸಾಕಿದೆ ಎಂಬುದಕ್ಕೆ ಸಾಕ್ಷಿಯಾಗಿ ಎಂದು ನಿಮ್ಮನ್ನು ಈ ರೀತಿ ಒತ್ತಾಯಿಸುತ್ತಿದ್ದೇನೆ.
ಕತ್ತಿ ಒಬ್ಬರೇ ಇಂತಹ ಹೇಳಿಕೆ ಕೊಟ್ಟಿಲ್ಲ. ಎಲ್ಲರೂ ಬೇಜವಾಬ್ದಾರಿಗಳು, ಹೊಣೆಗಾರಿಕೆ ಇಲ್ಲದವರು, ಇದಕ್ಕಾಗಿ ಜನ ಸರಕಾರವನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. ಯಾವುದೋ ಹೆಣ್ಣು ಮಗಳು ರಾಜಕಾರಣಿಗಳನ್ನು ಬಯ್ಯುತ್ತಿರುವ ವಿಡಿಯೋ ನೋಡಿದೆ. ಬಿಜೆಪಿಯವರು ಸಮಾವೇಶ ಮಾಡಿದರು ಎಂದು ನೀವು ಯಾಕೆ ಮಾಡಿದಿರಿ ಎಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ.
ನಾನು ಕಾರ್ಯಕರ್ತರಿಗೆ, ಯೂತ್ ಕಾಂಗ್ರೆಸ್ ನವರಿಗೆ ಸೂಚನೆ ನೀಡಿದ್ದು, ಕೂಡಲೇ ಉಮೇಶ್ ಕತ್ತಿ ಅವರ ಅಣಕು ಶವಕ್ಕೆ ಚಟ್ಟ ಕಟ್ಟಿ, ಅದನ್ನು ಯಡಿಯೂರಪ್ಪನವರ ಮನೆಗೆ ಕಳುಹಿಸಿಕೊಡಿ ಎಂದಿದ್ದೇನೆ. ಪೊಲೀಸರು ಬೇಕಾದರೆ ಬಂಧಿಸಲಿ.
2 ಕೆ.ಜಿ ಅಲ್ಲ, 10 ಕೆ.ಜಿ ಬೇಕು:
ಸರ್ಕಾರ ಜನಸಾಮಾನ್ಯರಿಗೆ 2 ಕೆ.ಜಿ ಬದಲು 10 ಕೆ.ಜಿ ಅಕ್ಕಿ ನೀಡಬೇಕು ಎಂದು ಆಗ್ರಹಿಸಿ ನಾಳೆಯಿಂದ ಮುಖ್ಯಂತ್ರಿಗಳನ್ನು ಪತ್ರ ಚಳವಳಿ ಮೂಲಕ ಆಗ್ರಹಸುತ್ತೇವೆ. ಸಾರ್ವಜನಿಕರು ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಈ ಚಳವಳಿಯಲ್ಲಿ ಭಾಗವಹಿಸಬೇಕು ಎಂದು ಪಕ್ಷದ ಪರವಾಗಿ ಮನವಿ ಮಾಡುತ್ತೇನೆ.
ಇದರ ಜತೆಗೆ ವಿಡಿಯೋ ಮಾಡಿ ನಿಮ್ಮ ನೋವು, ಈ ಕಷ್ಟ ಕಾಲದಲ್ಲಿ 10 ಕೆ.ಜಿ ಅಕ್ಕಿ ಯಾಕೆ ಕೊಡಬೇಕು ಎಂಬುದನ್ನು ವಿವರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸರ್ಕಾರಕ್ಕೆ ಆಗ್ರಹಿಸಿ. ಸರ್ಕಾರ ನಿಮ್ಮ ಮನವಿ ಸ್ವೀಕರಿಸದಿದ್ದರೆ, ನಾವು ನಿಮಗೆ ಒಂದು ಸಂಖ್ಯೆ ನೀಡುತ್ತೇವೆ. ಅದಕ್ಕೆ ಕಳುಹಿಸಿಕೊಡಿ.
ಈ ಚಳವಳಿಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಎಲ್ಲ ಜಿಲಾಧ್ಯಕ್ಷರು ಪಧಾಧಿಕಾರಿಗಳು, ಕಾರ್ಯಕರ್ತರಿಗೆ ಮನವಿ ಮಾಡುತ್ತಿದ್ದೇನೆ. ಈ ಚಳವಳಿ ಮಂತ್ರಿಯನ್ನು ಮನೆಗೆ ಕಳುಹಿಸುವ ಚಳವಳಿ ಆಗಬೇಕು.
ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಲಿ:
ಇನ್ನು ಲಸಿಕೆ ಪಡೆಯಲು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ನಾನು ಮುಖ್ಯಮಂತ್ರಿಗಳಿಗೆ ಕೇಳಲು ಇಚ್ಛಿಸುತ್ತೇನೆ. ನೀವು ಬುದ್ಧಿವಂತರಿದ್ದೀರಿ, ನಿಮ್ಮ ಬಳಿ ಜನ ಇದ್ದಾರೆ. ನಮ್ಮ ಹಳ್ಳಿ ಜನರಿಗೆ ಆನ್ ಲೈನ್ ವ್ಯವಸ್ಥೆ ಇಲ್ಲ. ಆ ಬಗ್ಗೆ ಅವರಿಗೆ ಗೊತ್ತಿಲ್ಲ. ಯಾರಿಗೆ ಅನುಕೂಲ ಇದೆಯೋ, ಯಾರು ವಿದ್ಯಾವಂತರೋ ಅವರಿಗೆ ಮಾತ್ರ ಲಸಿಕೆ ಕೊಡುತ್ತೀರಾ? ಬಡವರು, ಅವಿದ್ಯಾವಂತರು, ಮುಗ್ಧರಿಗೆ ಲಸಿಕೆ ನೀಡುವುದಿಲ್ಲವ ಎಂದು ಕಾಣುತ್ತಿದೆ. ಈ ಆನ್ ಲೈನ್ ವ್ಯವಸ್ಥೆ ತಪ್ಪಿಸಿ, ಪ್ರತಿಯೊಬ್ಬ ನಾಗರೀಕನಿಗೂ ಅವನ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ.
ನೆರೆ ರಾಷ್ಟ್ರ ಭೂತಾನ್ ನಲ್ಲಿ ಹಳ್ಳಿಗಾಡಿನಲ್ಲಿ ಇರುವ ಬೆರಳೆಣಿಕೆ ಜನರಿಗೆ ಹೆಲಿಕಾಪ್ಟರ್ ನಲ್ಲಿ ಹೋಗಿ ಲಸಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ದೊರಕಿಸಬೇಕು.
ಎರಡನೇ ಡೋಸ್ ಲಸಿಕೆ ಪಡೆದವರಿಗೆ ನೀಡುವ ಸರ್ಟಿಫಿಕೇಟ್ ನಲ್ಲಿ ಮೋದಿ ಅವರ ಫೋಟೋ ಹಾಕುತ್ತಿದ್ದೀರಿ, ಕೋವಿಡ್ ನಿಂದ ಸಾಯುತ್ತಿದ್ದಾರಲ್ಲ ಅವರ ಮರಣ ಪತ್ರದಲ್ಲೂ ಮೋದಿ ಅವರ ಫೋಟೋ ಹಾಕುತ್ತೀರಾ? ಸರ್ಕಾರ ಈ ತಾರತಮ್ಯ ಮಾಡದೇ, ಎಲ್ಲರಿಗೂ ಲಸಿಕೆ ಹಾಕಿಸಲಿ. ಯಾರ ಫೋಟೋ ಹಾಕುವುದೂ ಬೇಡ. ಜನರಿಗೆ ಲಸಿಕೆ ನೀಡುತ್ತಿರುವುದು ಸರ್ಕಾರ. ಜನರ ದುಡ್ಡಿನಲ್ಲಿ ನೆರವಾಗುವುದು ನಿಮ್ಮ ಜವಾಬ್ದಾರಿ, ಅದನ್ನು ಮಾಡುತ್ತಿದ್ದೀರಿ ಅಷ್ಟೇ.
ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಅರಂಭಿಸುವ ಬಗ್ಗೆ ಚರ್ಚೆ ನಡೆಸಿ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಅಂತಿಮವಾದ ನಂತರ ಮಾಹಿತಿ ನೀಡುತ್ತೇನೆ.
ಖಾಸಗಿ ಆಸ್ಪತ್ರೆಗಳಿಗೆ ಸರಕಾರವೇ ರೆಮ್ಡಿಸಿವಿಯರ್, ಆಕ್ಸಿಜನ್ ಪೂರೈಸಲಿ
ಕೊರೋನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರವು ಖಾಸಗಿ ಆಸ್ಪತ್ರೆಗಳಿಂದ ಶೇ. 80 ರಷ್ಟು ಹಾಸಿಗೆ ಪಡೆಯುತ್ತಿದೆ. ಆದರೆ ಈ ಆಸ್ಪತ್ರೆಗಳಿಗೆ ರೆಮ್ಡಿಸಿವಿಯರ್, ಆಕ್ಸಿಜನ್ ಮತ್ತಿತರ ಅಗತ್ಯ ಔಷಧಗಳನ್ನು ಪೂರೈಸುವುದಿಲ್ಲ, ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದರೆ ಎಷ್ಟು ಸರಿ?
ಸರ್ಕಾರಿ ಆಸ್ಪತ್ರೆಗಳಿಗೆ ರೆಮ್ಡಿಸಿವಿಯರ್ ಪೂರೈಕೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೂ ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಅಭಾವ ಹೆಚ್ಚಾಗುತ್ತಿದೆ. ಹೊರಗೆ 20 ರಿಂದ 40 ಸಾವಿರ ರುಪಾಯಿವರೆಗೂ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದರರ್ಥ ಏನು? ಸರ್ಕಾರಿ ಆಸ್ಪತ್ರೆಯಲ್ಲಿ ಇದರ ದುರ್ಬಳಕೆಯಾಗುತ್ತಿದೆ ಎಂದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರವೇ ಡ್ರಗ್ ಕಂಟ್ರೋಲರ್ ಮೂಲಕ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಈ ಚುಚ್ಚುಮದ್ದು ಪೂರೈಸಬೇಕು. ಇವುಗಳ ಬಳಕೆ ಹಾಗೂ ಬೆಲೆ ಮೇಲೆ ನಿಗಾ ವಹಿಸಬೇಕು.
ಸರ್ಕಾರ ಈ ವಿಚಾರದಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕೇ ಹೊರತು, ಖಾಸಗಿ ಅವರು ತಮಗೆ ಬೇಕಾದ ಔಷಧ ತಾವೇ ತರಿಸಿಕೊಳ್ಳಲಿ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು.
ಬಾಕಿ ಪಾವತಿಸಿ
ಕಳೆದ ವರ್ಷ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಹಣ ಪಾವತಿಸದೆ, ಬಾಕಿ ಉಳಿಸಿಕೊಂಡಿದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು.
ಅನೇಕ ಖಾಸಗಿ ಆಸ್ಪತ್ರೆಯವರು ನನಗೆ ದೂರವಾಣಿ ಕರೆ ಮಾಡಿ ಬಾಕಿ ಬಿಡುಗಡೆಗೆ ಸರಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದ್ದಾರೆ. ಕಳೆದ ವರ್ಷದ ಬಾಕಿ ಬಿಡುಗಡೆ ಮಾಡದೇ ಈ ವರ್ಷ ಹಾಸಿಗೆಗಳನ್ನು ಕೊಡಿ ಎಂದು ಸರಕಾರ ಕೇಳುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ವರದಿ: ಸಿಸಿಲ್ ಸೋಮನ್

