ಆರ್ಆರ್ ನಗರ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಸಭೆ ನಡೆಸಿ ಸ್ಥಳೀಯರ ಜೊತೆಗೆ ಚರ್ಚಿಸಿ ಪಕ್ಷದ ವರಿಷ್ಠರಿಗೆ ವರದಿಯನ್ನಕಳಿಸುತ್ತೇವೆ. ನಂತರ ಸಮರ್ಥವಾಗಿ ಕೆಲಸ ಮಾಡುವವರನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು. ಇನ್ನು ಕ್ಷೇತ್ರದಲ್ಲಿ ಸ್ಥಳೀಯವಾಗಿ ಜೆಡಿಎಸ್, ಬಿಜೆಪಿ ನವರು ನನ್ನ ಜೊತೆ ಚೆನ್ನಾಗಿದ್ದಾರೆ ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವರ ಹೆಸರು ಚರ್ಚೆಯಾಗುತ್ತಿದೆ. ಈಗ ಹೇಳುವುದಕ್ಕೆ ಆಗಲ್ಲ ಯಾರಾದರೂ ಆಗಬಹುದು ಕಾದು ನೋಡಿ. ಒಟ್ಟಿನಲ್ಲಿ ಯುದ್ಧ ಪ್ರಾರಂಭವಾಗಿದೆ. ಮುನಿರತ್ನ ನಮ್ಮ ವೈರಿಯಲ್ಲ ಭಾರತೀಯ ಜನತಾ ಪಕ್ಷ ನಮ್ಮ ವೈರಿ ಎಂದರು. ಬಿಜೆಪಿಯಲ್ಲಿ ಮುನಿರತ್ನ ಅವರಿಗೆ ಟಿಕೆಟ್ ಸಿಗವುದು ಅನುಮಾನ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾದು ನೋಡಿ ಏನಾಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯಲ್ಲಿ ಮುನಿರತ್ನಗೆ ಟಿಕೆಟ್ ಸಿಗುವ ಬಗ್ಗೆ ಸಂಸದ ಡಿ ಕೆ ಸುರೇಶ್ ಅನುಮಾನವನ್ನುವ್ಯಕ್ತಪಡಿಸಿದರು.
ಇತ್ತೀಚೆಗೆ ಭಾರಿ ಸದ್ದು ಮಾಡಿರುವ ಡ್ರಗ್ಸ್ ವಿಚಾರವನ್ನ ರಾಜಕೀಯಕ್ಕೆ ಬಳಸಲು ಬಿಜೆಪಿ ತಯಾರಿ ನಡೆಸಿದೆ. ಡ್ರಗ್ಸ್ ಹೆಸರಲ್ಲಿ ಪ್ರತಿಪಕ್ಷಗಳ ಕಾರ್ಯಕರ್ತರು ಮುಖಂಡರ ಮೇಲೆ ದಾಳಿ ನಡೆಸುವ ಸಂಚು ನಡೆಯುತ್ತಿದೆ ಇದು ಸರಿಯಲ್ಲ. ಉಪಚುನಾವಣೆಯಲ್ಲಿ ಪ್ರತಿಪಕ್ಷಗಳನ್ನ ಹತ್ತಿಕ್ಕಲು ಬಿಜೆಪಿ ಈ ಪ್ಲಾನ್ ಮಾಡುತ್ತಿದೆ. ನನಗೆ ಈಗಾಗಲೇ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಎಂದರು.
ನಿಜವಾದ ಡ್ರಗ್ಸ್ ಜಾಲದಲ್ಲಿ ತೊಡಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಿ ಅದು ಬಿಟ್ಟು ಅನಾವಶ್ಯಕವಾಗಿ ರಾಜಕೀಯ ಪಕ್ಷಗಳ ಮುಖಂಡರನ್ನ ಟಾರ್ಗೆಟ್ ಮಾಡಿದ್ರೆ ನಾವು ಸುಮ್ಮನಿರಲ್ಲ. ಈಗ ರಾಜಕಾರಣಿಗಳನ್ನ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತೆ ಅಂತ ಹೇಳಲಾಗುತ್ತಿದೆ. ಉಪಚುನಾವಣೆಯಲ್ಲಿ ಡ್ರಗ್ಸ್ ಹೆಸರಿನಲ್ಲಿ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ರಾಜಕೀಯ ಲಾಭ ಪಡೆಯಲು ಹೊರಟಿದೆ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನೆ ಇರಲ್ಲ. ಹೋರಾಟ ಮಾಡಬೇಕಾಗುತ್ತದೆ. ಬೆಂಗಳೂರು ಪೊಲೀಸ್ ಕಮಿಷನರ್ ಇದಕ್ಕೆ ಅನುವು ಮಾಡಿಕೊಡಬಾರದು ಎಂದು ಡಿ ಕೆ ಸುರೇಶ್ ಹೇಳಿದರು.
ಬೆಂಗಳೂರು ಉಗ್ರರ ಹಬ್ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿ ಎಲ್ಲರೂ ಇದ್ದಾರೆ. ಉಗ್ರರ ಹಬ್ ಅನ್ನುವ ಮಾತನ್ನ ವಾಪಸ್ ಪಡೆಯಬೇಕು. ಮಾತಿನಿಂದಲೇ ಪ್ರಚಾರ ತೆಗೆದುಕೊಳ್ಳಲು ಮಾತನಾಡುವುದು ಸರಿಯಲ್ಲ. ಇಲ್ಲವಾದರೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
