ಶಿವಮೊಗ್ಗ: ಸಿಗಂದೂರು ದೇವಾಲಯದ ಸುದ್ದಿಗೆ ಬಂದರೆ ಹುಷಾರ್ ಎಂದು ಗುಡುಗಿದರು ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ.

ಸಿಗಂದೂರು ದೇವಾಲಯ ಗೊಂದಲವಿದ್ದರೆ ರಾಮಪ್ಪ ಹಾಗೂ ಶೇಷಗಿರಿ ಭಟ್ಟರು ಬಗೆಹರಿಸಿಕೊಳ್ಳುತ್ತಾರೆ. ಮಧ್ಯದಲ್ಲಿ ಮೂರನೇ ವ್ಯಕ್ತಿಯಾಗಿ ಜಿಲ್ಲಾಧಿಕಾರಿ ಹಾಗೂ ಸರ್ಕಾರ ತಲೆಹಾಕುವುದು ಸರಿಯಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಸಿಗಂದೂರು ದೇವಾಲಯದಲ್ಲಿ ಅರಣ್ಯ ಒತ್ತುವರಿ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಸರಿಯಾಗಿ ದಾಖಲೆ ತೆಗೆದರೆ ಜಿಲ್ಲಾಧಿಕಾರಿಗಳು ಕಚೇರಿ ಕೂಡ ಅರಣ್ಯ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಆರೋಪಿಸಿದರು.

ಸಿಗಂದೂರು ದೇವಾಲಯ ಕಳೆದ ಒಂದೂವರೆ ತಿಂಗಳು ಸಾಕಷ್ಟು ಚರ್ಚೆಯಲ್ಲಿದೆ. ಸಾಗರದ ಕೋರ್ಟ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ, ಗೊಂದಲ ಬಗೆಹರಿಸಲಾಯಿತು. ಆದರೆ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ನೋಟಿಸ್ ನೀಡದೆ ಈಗ ಸಮಿತಿ ಮಾಡಿದೆ. ಒಂದು ಖಾಸಗಿ ಟ್ರಸ್ಟನ್ನು ಒಳಗೆ ರಾಜಕೀಯ ಉದ್ದೇಶದಿಂದ ಕೈಹಾಕುವ ಕೆಲಸ ಮಾಡಲಾಗಿದೆ ಎಂದರು. ಈ ಘಟನೆ ನಡೆದಾಗ ಜಿಲ್ಲೆಯ ಸಾಗರದ ಶಾಸಕರು, ಸಂಸದರು ಎಲ್ಲಿ ಹೋಗಿದ್ದರು. ಜನಪ್ರತಿನಿಧಿಗಳಾದ ಇವರಿಗೆ ಒಂದು ಸಣ್ಣ ಘಟನೆ ನಡೆದಾಗ ಬಗೆಹರಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ಗಲಾಟೆಗಳು ನಡೆದಿಲ್ಲವೇ?
ಗೋಕರ್ಣ, ಉಡುಪಿ ಮಠ ಸೇರಿದಂತೆ ಎಲ್ಲಾ ಕಡೆಗೂ ಗಲಾಟೆಗಳಾಗಿದ್ದವು. ಆ ಸಮಯದಲ್ಲಿ ಎಲ್ಲಿ ಸಮಿತಿಗಳು ರಚನೆಯಾಗಿವೆ ಎಂದು ಸ್ಪಷ್ಟಪಡಿಸಿ. ಆದರೆ ಸಿಗಂದೂರು ವಿಚಾರದಲ್ಲಿ ಮಾತ್ರ ಜಾತ್ರೆಯ ವಿಚಾರ ಎಳೆದು ತರಲಾಗುತ್ತಿದೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಇದೀಗ ಸಮುದಾಯದ ಹೆಸರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದರೆ. ಮಾತನಾಡಿ ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಮುಜರಾಯಿ ಸಚಿವರು ಹೇಳಬಹುದಿತ್ತು. ಆದರೆ ಈವರಿಗೆ ಒಂದು ಮಾತನಾಡಿಲ್ಲ. ಒಂದು ಸಣ್ಣ ಸಮಸ್ಯೆ ಬಗೆಹರಿಸಲು ಶಾಸಕರಾದವರಿಗೆ ಸಾಧ್ಯವಿಲ್ಲವೇ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಮಾಡಿದರು.
ಸಿಗಂದೂರು ಉಳಿಸಲು ಹೋರಾಟ ಮಾಡಲು ಸಿದ್ಧತೆ ನಡೆಸಿದ್ದೇವೆ ಎಲ್ಲಾ ಸಮುದಾಯದವರು ಸೇರಿಕೊಂಡು ದೇವಸ್ಥಾನ ಉಳಿಸಲು ಬೃಹತ್ ಹೋರಾಟ ಮಾಡುತ್ತೇವೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.

ವರದಿ: ಹರ್ಷ ಸಾಗರ
