ಬೆಂಗಳೂರು: ಪುಣ್ಯಭೂಮಿ ದಕ್ಷಿಣ ಕನ್ನಡದಿಂದ ಕಾಂಗ್ರೆಸ್ ಅನ್ನು ಕೇಡರ್ ಪಕ್ಷ ಮಾಡುವ ಕಾಯಕಲ್ಪ ಆರಂಭ – ಡಿ.ಕೆ. ಶಿವಕುಮಾರ್.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆ ಈ ದೇಶಕ್ಕೆ ಸಂಸ್ಕೃತಿ ಕೊಟ್ಟ ಪವಿತ್ರ ಭೂಮಿ. ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಕ್ಷವಾಗಿ ಪರಿವರ್ತಿಸುವ ಕಾಯಕಲ್ಪವನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಬುಧವಾರ ನಡೆದ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ಹಾಗೂ ಸಂಕಲ್ಪ ಸಭೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು:
‘ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯಾದಾನ, ಆರ್ಥಿಕ ಶಕ್ತಿ ಕೊಟ್ಟ ಭೂಮಿ. ಈ ಭೂಮಿಯನ್ನು ಈಗ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಭೂಮಿಯಲ್ಲಿ ಮತದಾರರು ಯಾರಿಗೆ ಬೆಂಬಲ ನೀಡುತ್ತಾರೋ ಅವರ ಸರ್ಕಾರ ಬಂದಿರೋದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಈ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗುತ್ತಿದೆ.’
‘ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ಮೈಸೂರು ವಿಭಾಗದ ನಾನಾ ಜಿಲ್ಲೆಗಳ ಎಲ್ಲ ಅಧ್ಯಕ್ಷರು, ಸೋತ ಅಭ್ಯರ್ಥಿಗಳನ್ನು ಆಹ್ವಾನಿಸಿ, ಸ್ಥಳೀಯ ಸಮಸ್ಯೆಗಳೇನಿವೆ? ಎಂಬುದನ್ನು ಆಲಿಸುತ್ತಿದ್ದೇವೆ. ನಾವದನ್ನು ಜನರ ಮುಂದೆ ಇಡುತ್ತೇವೆ. ಸ್ಥಳೀಯ ಸಮಸ್ಯೆ ಜತೆಗೆ ಸಂಘಟನೆ ವಿಚಾರವಾಗಿ ಪ್ರತಿಯೊಬ್ಬ ಬ್ಲಾಕ್ ಅಧ್ಯಕ್ಷರೂ ಇಂದು ಮಾತನಾಡಲಿದ್ದಾರೆ. ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಆಗಿ ಪರಿವರ್ತಿಸುತ್ತೇವೆ ಎಂದು ಪ್ರತಿಜ್ಞಾ ದಿನ ತಿಳಿಸಿದ್ದೇವೆ. ಈಗ ಆ ಸಂಕಲ್ಪವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಅನುಷ್ಠಾನಕ್ಕೆ ತರುತ್ತಿದ್ದೇವೆ.’
ಗೋಹತ್ಯೆ ನಿಷೇಧ ಕಾಯ್ದೆ ಬದಲಾವಣೆ ಅಗತ್ಯವಿರಲಿಲ್ಲ:
‘ಗೋಹತ್ಯೆ ನಿಷೇಧ ಕಾನೂನು ದೇಶದಲ್ಲಿ ಈಗಾಗಲೇ ಜಾರಿಯಲ್ಲಿತ್ತು. ಅದನ್ನು ಬದಲಿಸುವ ಅಗತ್ಯ ಇರಲಿಲ್ಲ. ರಾಜಕಾರಣಕ್ಕಾಗಿ ಇದನ್ನು ಹೊಸದಾಗಿ ತರುತ್ತಿದ್ದಾರೆ. ನಾವೆಲ್ಲ ಗೋಮಾತೆಗೆ ಗೌರವ ನೀಡುತ್ತೇವೆ. ಅದು ನಮ್ಮ ಸಂಸ್ಕೃತಿ. ಆದರೆ ಆಡಳಿತ ಪಕ್ಷದವರು ರಾಜಕಾರಣಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಅವರ ವೈಯಕ್ತಿಕ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಈ ಕಾನೂನು ಮೊದಲೇ ಜಾರಿಯಲ್ಲಿತ್ತು ಎಂದು ಅವರೇ ಹೇಳಿದ್ದಾರೆ.
ಗೋ ಸಂರಕ್ಷಣೆ ಮಾಡುವುದಾದರೆ, ಮೊದಲು ಗೋಮಾಂಸ ರಫ್ತು ನಿಷೇಧಿಸಿ. ರೈತರಿಗೆ ಪ್ರತಿ ಹಸು ಸಾಕಲು 25 ಸಾವಿರದಿಂದ 50 ಸಾವಿರ ರುಪಾಯಿ ಪ್ರೋತ್ಸಾಹ ಧನ ನೀಡಲಿ. ಇದು ಒಂದು ವರ್ಗದ ವಿಚಾರವಲ್ಲ. ರೈತರು ಎಲ್ಲ ಸಮುದಾಯದವರು. ಎಲ್ಲ ವರ್ಗದವರೂ ಹಸು ಸಾಕುತ್ತಾರೆ. ಹೀಗಾಗಿ ಎಲ್ಲರಿಗೂ ಸರ್ಕಾರ ಪರಿಹಾರ ನೀಡಬೇಕು. ಇಲ್ಲವಾದರೆ ಆ ಹಸುವಿಗೆ ಇರುವ ಬೆಲೆಯನ್ನು ಕೊಟ್ಟು ಅದನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಕಟ್ಟಿಕೊಳ್ಳಲಿ.

ವರದಿ: ಸಿಸಿಲ್ ಸೋಮನ್

