ಶಿವಮೊಗ್ಗ : ಬೆಳಿಗ್ಗೆ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬಳಿಕ ನಗರದಲ್ಲಿ ಅಹಿತಕರ ಘಟನೆಗಳು ನಡೆದಿವೆ. ಗಲಾಟೆ ಪ್ರಕರಣಗಳು ಹತೋಟಿ ಮೀರುತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಿಗ್ಗೆ ಶಿವಮೊಗ್ಗದ ದೀಪಕ್ ಪೆಟ್ರೋಲ್ ಬಂಕ್ ಹಿಂಭಾಗದ ರಸ್ತೆಯಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಗೇಶ್ ಮೇಲೆ ಹಲ್ಲೆ ನಡೆದಿದ್ದೂ ಅವರನ್ನು ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಯ ವಿಷಯ ತಿಳಿಯುತ್ತಲೇ ಉದ್ರಿಕ್ತರು ಕಾರು, ರಿಕ್ಷಾಗಳ ಗಾಜುಗಳನ್ನು ಪುಡಿ ಮಾಡಿದ್ದು ಗಲಾಟೆ ಮತ್ತಷ್ಟು ಪ್ರದೇಶಗಳನ್ನು ಆವರಿಸುವ ಲಕ್ಷಣಗಳು ಕಂಡುಬರುತ್ತಿವೆ ಎನ್ನಲಾಗಿದೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಪ್ರಯತ್ನ ಪಡುತ್ತಿದ್ದೂ ಗಾಂಧಿಬಜಾರ್, ರವಿವರ್ಮ ಬೀದಿ ಹಾಗೂ ಕಸ್ತೂರ್ಬಾ ರಸ್ತೆಯಲ್ಲಿ ಕಾರು ಮತ್ತು ಆಟೋ ರಿಕ್ಷಾಗಳ ಗಾಜುಗಳನ್ನು ಪುಡಿಮಾಡಲಾಗಿದೆ.ಗಾಂಧಿಬಜಾರ್ ನಿಂದ ಮತ್ತಷ್ಟು ಏರಿಯಾಗಳೀಗೆ ವ್ಯಾಪಿಸಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರ ತಂಡ ನಿಯೋಜಿಸಲಾಗಿದೆ.

ಈವರೆಗಿನ ಗಲಾಟೆಯಲ್ಲಿ ಒಟ್ಟು ಹನ್ನೊಂದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ನಾಲ್ಕು ಕಾರು ಹಾಗೂ ಒಂದು ಆಟೋ ರಿಕ್ಷಾ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಪೂರ್ವವಲಯ ಐಜಿಪಿ ಎಸ್.ರವಿ ಭೇಟಿ ನೀಡಿದ್ದು ಘರ್ಷಣೆ ಕುರಿತು ಶಿವಮೊಗ್ಗ ಎಸ್ಪಿ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ಸೂಚನೆ ನೀಡಲಾಗಿದ್ದು. ಆದೇಶ ಉಲ್ಲಘಿಂಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ವರದಿ: ಹರ್ಷ ಸಾಗರ
