ಯಾದಗಿರಿ: ಇಷ್ಟು ದಿನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಚಾಲಾಕಿ ಕಳ್ಳನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಪಕ್ಕಾ ಪ್ಲಾನ್ ಮಾಡಿ ಬಲೆ ಬೀಸಿದ್ದು, ಭರ್ಜರಿ ಬೇಟೆಯಾಡಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಬೈಕ್ ಕಳ್ಳತನವಾಗುತ್ತಿದ್ದವು. ಇದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಬೈಕ್ ಕಳ್ಳನನ್ನು ಹಡೆಮುರಿ ಕಟ್ಟಿದ್ದಾರೆ. ಪೊಲೀಸರ ಈ ಕಾರ್ಯದಿಂದ ಹುಸಣಸಗಿ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಜಾಲದ ರೂವಾರಿ ಮೌನೇಶ್ (27) ಈಗ ಕಂಬಿ ಏಣಿಸುತ್ತಿದ್ದಾನೆ. ಬಂಧಿತನಿಂದ 9 ಲಕ್ಷಕ್ಕೂ ಅಧಿಕ ಮೌಲ್ಯದ 25 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲವು ದಿನಗಳಿಂದ ಯಾದಗಿರಿ ಪೊಲೀಸರಿಗೆ ಬೈಕ್ ಕಳ್ಳತನ ಪ್ರಕರಣಗಳು ತಲೆನೋವಾಗಿದ್ದವು. ಅದರಲ್ಲೂ ಹುಣಸಗಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಸಿಪಿಐ ದೌವಲತ್, ಪಿಎಸ್‍ಐ ಬಾಪುಗೌಡ ನೇತೃತ್ವದಲ್ಲಿ ಯಾದಗಿರಿ ಎಸ್‍ಪಿ ಋಷಿಕೇಶ್ ಭಗವಾನ್ ವಿಶೇಷ ತಂಡ ರಚಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಸಿಪಿಐ ದೌವಲತ್ ಮತ್ತು ಪಿಎಸ್‍ಐ ಬಾಪುಗೌಡ, ಕೆಲವೇ ದಿನಗಳಲ್ಲಿ ಪ್ರಕರಣದ ಆರೋಪಿ ಕಿಂಗ್ ಪಿನ್ ಮೌನೇಶ್ ನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೌನೇಶ್ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ರಾಮನಳ್ಳಿ ನಿವಾಸಿ. ಸದ್ಯ ಬಲಶೆಟ್ಟಿಹಾಳದಲ್ಲಿ ನೆಲೆಸಿದ್ದ ಈತ, ಹುಣಸಗಿ ಪಟ್ಟಣದಲ್ಲಿ ಬೈಕ್ ಕದ್ದು ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಇತ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಕಡಿಮೆ ಅವಧಿಯಲ್ಲಿ ಭೇದಿಸಿರುವ ಸಿಪಿಐ ದೌವಲತ್ ಮತ್ತು ಬಾಪುಗೌಡ ತಂಡದ ಕಾರ್ಯವನ್ನು ಮೆಚ್ಚಿರುವ, ಎಸ್‍ಪಿ ಋಷಿಕೇಶ್ ಬಹುಮಾನ ಘೋಷಿಸಿದ್ದಾರೆ.

ವರದಿ: ಸಿಸಿಲ್ ಪಿ.ಎಸ್
