ಸಾಗರ: ಸಾಗರದ ಹಳೇ ಇಕ್ಕೇರಿಯಲ್ಲಿ ಜೋಡಿ ಕೊಲೆ ಆರೋಪಿ ಮೇಲೆ ಫೈರಿಂಗ್, ಇಕ್ಕೇರಿ ಸಮೀಪದ ಕಸೆಕಸೆಕೊಡ್ಲುವಿನಲ್ಲಿ ನಡೆದ ತಾಯಿ-ಮಗನ ಜೋಡಿ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಅ.10ರಂದು ಸಾಗರ ತಾಲ್ಲೂಕಿನ ಕುನ್ನಿಕೋಡುನಲ್ಲಿ ಬಂಗಾರಮ್ಮ (65), ಅವರ ಮಗ ಪ್ರವೀಣ್ (34) ಕೊಲೆಯಾಗಿತ್ತು. ಅಂದು ಕೊಲೆ ಮಾಡಿದ ಆರೋಪಿ ಭರತ್ ಅಂತಹ ಸ್ಥಿತಿಯಲ್ಲೂ ಮೃತ ಪ್ರವೀಣನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಸಾಗರ ಉಪ ವಿಭಾಗ ಡಿವೈಎಸ್ಪಿ ವಿನಾಯಕ ಶೆಟಗೇರಿಯವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳಾದ ಭರತ್ ಮತ್ತು ಶ್ರುತಿ ಎಂಬುವರನ್ನು ಬಂಧಿಸಿದೆ. ಸ್ಥಳ ಮಹಜರು ನಡೆಸಿ ಬೆಂಗಳೂರು ಮೂಲದ ಆರೋಪಿ ಭರತ್ ಕರೆತರುವಾಗ ಬಳಸಗೋಡು ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಆರೋಪಿ ಭರತ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯ ಬಲಗಾಲಿಗೆ ಪೆಟ್ಟು ಬಿದ್ದಿದ್ದು, ಆತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರು.
ಮತ್ತೊರ್ವ ಆರೋಪಿ ಶ್ರುತಿಯನ್ನೂ ಬಂಧಿಸಲಾಗಿದೆ. ಭರತ್ ಮತ್ತು ಶ್ರುತಿ ಪ್ರೇಮಿಗಳಾಗಿದ್ದರು. ಶ್ರುತಿಯ ಕೆಲವು ಖಾಸಗಿ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡು ಪ್ರವೀಣ್ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಲು ಸಂಚು ರೂಪಿಸಿದ್ದರು. ಪ್ರವೀಣ್‌ನನ್ನು ಬಿಡಿಸಲು ಅಡ್ಡ ಬಂದ ತಾಯಿಯೂ ಕೊಲೆಯಾದರು. ನಂತರ ಪ್ರವೀಣನ ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಅವರ ಬಳಿ ಇದ್ದ ₹ 4 ಸಾವಿರ ದೋಚಿ ಪರಾರಿಯಾಗಿದ್ದರು ಎಂದು ವಿವರಿಸಿದರು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ವಿನಾಯಕ ಶೆಟಗೇರಿ, ಕುಮಾರಸ್ವಾಮಿ, ಅಭಯಪ್ರಕಾಶ್, ಉಮೇಶ್, ಭರತ್‌ಕುಮಾರ್ ಮತ್ತು ಸಿಬ್ಬಂದಿ ಕಾರ್ಯ ಶ್ಲಾಘಿಸಿದರು.

ವರದಿ: ಸಿಸಿಲ್ ಪಿ.ಎಸ್
