ನವೆಂಬರ್ 3 ರಂದು ಶಿರಾ ಹಾಗೂ ಆರ್.ಆರ್ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೂರು ಪಕ್ಷಗಳಿಗೆ ಈ ಉಪಚುನಾವಣೆ ಮಹತ್ವದ್ದಾಗಿದ್ದು ಅದರಲ್ಲೂ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಾಲಿಗೆ ಆರ್.ಆರ್ ನಗರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.
ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮುನಿರತ್ನ ಪಾಲಿಗೆ ರಾಜಕೀಯ ಭವಿಷ್ಯದ ಪ್ರಶ್ನೆಯಾಗಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿದ ಬಳಿಕ ಡಿಕೆ ಶಿವಕುಮಾರ್ ಪಾಲಿಗೆ ಇದು ಮೊದಲ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಲೋಕಸಭೆ ಹಾಗೂ ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಏರಿರುವ ಡಿಕೆಶಿ ನಾಯಕತ್ವದಲ್ಲಿ ಉಪಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ ಹೊರಟಿದೆ.
ಈಗಾಗಲೇ ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಆದರೆ ಆರ್.ಆರ್ ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಇನ್ನು ಅಧಿಕೃತಗೊಂಡಿಲ್ಲ. ಆರ್ ಆರ್ ನಗರದಲ್ಲಿ ಒಕ್ಕಲಿಗ ಮತಗಳು ದೊಡ್ಡ ಮಟ್ಟದಲ್ಲಿದೆ. ಈ ಕ್ಷೇತ್ರದಲ್ಲಿ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತಲೂ ಮುನಿರತ್ನ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿದೆ. ಈ ಬಾರಿಯೂ ಸಾಧ್ಯಾಸಾಧ್ಯತೆಗಳು ಮುನಿರತ್ನ ಪಾಲಿಗೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಮುನಿರತ್ನಗೆ ಸರಿಸಾಟಿಯಾಗಿ ನಿಲ್ಲುವ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಸದ್ಯದ ಕುತೂಹಲವಾಗಿದೆ. ಈ ನಡುವೆ ಕಾಂಗ್ರೆಸ್‌ನಿಂದ ರಾಜುಕುಮಾರ್, ಮಾಗಡಿ ಬಾಲಕೃಷ್ಣ, ಡಿ.ಕೆ ರವಿ ಪತ್ನಿ ಕುಸುಮ ಹೆಸರುಗಳು ಚಾಲ್ತಿಯಲ್ಲಿವೆ. ಆದರೆ ಅಭ್ಯರ್ಥಿ ಆಯ್ಕೆಯ ಕುರಿತಾಗಿ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಎರಡು ಕ್ಷೇತ್ರಗಳ ಪೈಕಿ ಒಂದನ್ನಾದರೂ ಗೆಲ್ಲುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ನಡೆಸುತ್ತಿದೆ.
