ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕಾಂಗ್ರೆಸ್ 100 ಕೋಟಿ ರುಪಾಯಿ ಯೋಜನೆ ರೂಪಿಸಿದೆ – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್.
ನಾಡಿನ ಜನತೆಗೆ ಪವಿತ್ರ ರಂಜಾನ್ ಹಾಗೂ ಬಸವ ಜಯಂತಿಯ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಲಿ, ಕೋವಿಡ್ ಸಂಕಷ್ಟ ದೂರವಾಗಲಿ ಎಂದು ಎಲ್ಲ ಧರ್ಮದ ದೇವರಲ್ಲಿ ಪ್ರಾರ್ಥಿಸುತ್ತೇವೆ.
ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕೆಲಸ ನಿಲ್ಲಿಸಿ ಜನರ ಪ್ರಾಣ ರಕ್ಷಿಸುವುದು ನಮ್ಮ ಕರ್ತವ್ಯ. ಹೀಗಾಗಿ ಸ್ಥಳೀಯ ಅಭಿವೃದ್ಧಿಗಾಗಿ ಶಾಸಕರಿಗೆ ನೀಡಲಾಗುವ ಹಣವನ್ನು ಸಂಗ್ರಹಿಸಿ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು 100 ಕೋಟಿ ರೂ. ಯೋಜನೆಯನ್ನು ಪ್ರಕಟಿಸುತ್ತಿದ್ದೇವೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ನಾವಿದನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸುತ್ತೇವೆ. ಈ ಯೋಜನೆ ಅನುಷ್ಠಾನಕ್ಕೆ ನೀಲನಕ್ಷೆ ನೀಡುತ್ತೇವೆ.
ರಾಜ್ಯದ ಜನರಿಗೆ ಲಸಿಕೆ ನೀಡುವಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಪಕ್ಷದ ವತಿಯಿಂದ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಬೇಕಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಆತ್ಮನಿರ್ಭರ ಭಾರತದ ಮನೋಭಾವದಲ್ಲಿ ಉತ್ಪಾದಕರಿಂದ ಕಾಂಗ್ರೆಸ್ ನೇರವಾಗಿ ಲಸಿಕೆ ಖರೀದಿಸಿ, ಅದನ್ನು ಜನರಿಗೆ ವಿತರಿಸಲು ಅನುಮತಿ ನೀಡಬೇಕು ಎಂದು ನಾನು ಬಿಜೆಪಿ ಸರ್ಕಾರಗಳಲ್ಲಿ ಮನವಿ ಮಾಡುತ್ತೇನೆ.
ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕಾಂಗ್ರೆಸ್ 100 ಕೋಟಿ ರುಪಾಯಿ ಯೋಜನೆ ರೂಪಿಸಿದೆ. ಇದರಲ್ಲಿ 10 ಕೋಟಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಧಿಯಿಂದ ನೀಡಲಾಗುವುದು. ಉಳಿದ 90 ಕೋಟಿಯನ್ನು ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯ ಮೂಲಕ ಸಂಗ್ರಹಿಸಲಾಗುವುದು.
ಉಪಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯುತ್ತಿರುವುದಾಗಿ ಹೇಳುತ್ತಿದ್ದಾರೆ. ಇದರಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು. ಇಲ್ಲಿ ಯಾರಿಗೆ ಎಷ್ಟು ಪರ್ಸೆಂಟ್ ಎಂದು ಚರ್ಚೆ ನಡೆಯುತ್ತಿರುವುದು ನಮಗೆ ಗೊತ್ತಿದೆ. ಮುಖ್ಯಮಂತ್ರಿಗಳೇ ನಿಮ್ಮ ಗಮನಕ್ಕೆ ಬಾರದೇ ಈ ಕೆಲಸ ನಡೆಯುತ್ತಿದೆ. ಜನರ ಹಣ ಲಪಟಾಯಿಸಿದರೆ ನಾವು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ.
ನಿನ್ನೆ ಸದಾನಂದ ಗೌಡರು ನಾವೇನು ನೇಣು ಹಾಕಿಕೊಳ್ಳಬೇಕಾ ಅಂತಾ ಕೇಳುತ್ತಾರೆ? ಸದಾನಂದಗೌಡರೇ, ನೀವು ಕಾನೂನು ಸಚಿವರಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು. ನೀವು ನೇಣು ಹಾಕಿಕೊಳ್ಳಿ ಎಂದು ನಾವು ಹೇಳುವುದಿಲ್ಲ. ಆದರೆ ನೀವು ಲಸಿಕೆ ಕೊಡಲಿಲ್ಲ ಅಂತಾ ನಿಮಗೆ ಮತ ಹಾಕಿದವರು ನೇಣು ಹಾಕಿಕೊಳ್ಳಬೇಕಾ? ಜನ ನಿಮ್ಮ ಮಾತಿಗೆ ನಗುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಲಸಿಕೆ ನೀಡದೇ ಗುಜರಾತಿಗೆ ನೀಡುತ್ತಿರುವಾಗ ನೀವೂ ಸೇರಿ ರಾಜ್ಯದ 25 ಸಂಸದರು ಬಾಯಿ ಮುಚ್ಚಿಕೊಂಡಿದ್ದೀರಿ. ಇದು ಸರಿಯೇ?
ಇನ್ನು ಆಡಳಿತ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳು ನ್ಯಾಯಾಧೀಶರು ಸರ್ವಜ್ಞರೇ ಎಂದು ಪ್ರಶ್ನಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ. ನ್ಯಾಯಾಲಯದ ತೀರ್ಪುಗಳನ್ನು ನೆಲದ ಕಾನೂನು ಎಂದು ಪರಿಗಣಿಸುವಾಗ ಸಿ.ಟಿ. ರವಿ ಅವರು ಈ ರೀತಿ ಹೇಳಿರುವುದು ಅಪರಾಧ. ದಾರಿ ತಪ್ಪಿದಾಗ ಶಾಸಕಾಂಗವನ್ನು ಸರಿ ದಾರಿಗೆ ತರುವುದು ನ್ಯಾಯಾಂಗದ ಕರ್ತವ್ಯ. ನ್ಯಾಯಾಲಯಕ್ಕೆ ಅಗೌರವ ತಂದಿರುವುದು ಸರಿಯಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಹೊಣೆ ಹೊರಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ನ್ಯಾಯಾಲಯಗಳು ಕೆಲಸ ಮಾಡುವಂತಾಗಿವೆ. ಈ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಪಾತ್ರ ಕೂಡ ಬಹು ದೊಡ್ಡದಿದೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತವರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು.
ಇಂದಿರಾ ಕ್ಯಾಂಟೀನ್ ನಲ್ಲಿ ಗುರುತಿನ ಚೀಟಿ ಇಲ್ಲದೇ ಉಚಿತ ಆಹಾರ ನೀಡಲಾಗುವುದು ಅಂತಾ ಸರ್ಕಾರ ಹೇಳಿತ್ತು. ಆದರೆ ನಾವು ರಿಯಾಲಿಟಿ ಚೆಕ್ ಮಾಡಿದಾಗ ಗೊತ್ತಾಗಿದ್ದೇ ಬೇರೆ. ಒಬ್ಬ ವ್ಯಕ್ತಿ ಒಂದು ಊಟ ಪಡೆಯಲು ಸರ್ಕಾರ ಆತನ ಗುರುತಿನ ಚೀಟಿ ಕೇಳುತ್ತಿರುವುದು ದೇಶಕ್ಕೆ ನಾಚಿಕೆ ತರುವ ಕೆಲಸ. ಜನಸಾಮಾನ್ಯನ ಘನತೆಗೆ ಧಕ್ಕೆ ತರುವ ವಿಚಾರ.
ಸಿದ್ದರಾಮಯ್ಯ:
ನಾಡಿನ ಜನತೆಗೆ ಪವಿತ್ರ ರಂಜಾನ್ ಹಾಗೂ ಬಸವ ಜಯಂತಿ ಹಬ್ಬದ ಶುಭಾಶಯಗಳು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಲಸಿಕೆ ಕೋಡುವುದರಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ನಾವು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೇವೆ. ನಾವು ಹೇಳುವುದರ ಜತೆಗೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಲಸಿಕೆ ವಿಚಾರವಾಗಿ ಎರಡೂ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ನಿನ್ನೆ ಕೂಡ ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಛಿಮಾರಿ ಹಾಕಿದೆ. ನಾನು ನನ್ನ ಇಡೀ ರಾಜಕೀಯ ಜೀವನದಲ್ಲಿ ಇಷ್ಟು ಬೇಜವಾಬ್ದಾರಿ ಸರ್ಕಾರಗಳನ್ನು ನೋಡಿರಲಿಲ್ಲ. ಕೋವಿಡ್ 19 ಸಾಂಕ್ರಾಮಿಕ ರೋಗ ಬಂದು ಒಂದು ವರ್ಷಕ್ಕೂ ಹೆಚ್ಚಿನ ಸಮಯವಾಗಿದೆ. ಮೊದಲ ಅಲೆಯ ಅನುಭವ ಇದ್ದರೂ, ಎರಡನೇ ಅಲೆ ಜನವರಿಯಲ್ಲಿ ಬರುವುದಾಗಿ ಮಾಹಿತಿ ಇದ್ದರೂ ಈ ಸರಕಾರಗಳು ಎಚ್ಚೆತ್ತುಕೊಳ್ಳಲಿಲ್ಲ. ಎಲ್ಲರಿಗೂ ಲಸಿಕೆ ಕೊಡುವುದೇ ಇದಕ್ಕೆ ಪರಿಹಾರ ಎಂದು ತಜ್ಞರು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ನಿದ್ರಾವಸ್ಥೆಯಲ್ಲಿವೆ. ಹೀಗಾಗಿ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ.
ಲಸಿಕೆ ಬರಲು ತಿಂಗಳುಗಟ್ಟಲೆ ಸಮಯ ಬೇಕು ಅಂತಾ ಮುಖ್ಯಕಾರ್ಯದರ್ಶಿಗಳು ಹೇಳುತ್ತಾರೆ. ಕೋವಿಶೀಲ್ಡ್ ಎರಡನೇ ಲಸಿಕೆಗೆ 12 ರಿಂದ 16 ವಾರ ಅಂತರ ತೆಗೆದುಕೊಳ್ಳಬಹುದು ಎಂದು ಈಗ ಹೇಳುತ್ತಿದ್ದಾರೆ. ಆ ಮೂಲಕ ಜನರು, ನ್ಯಾಯಾಲಯಗಳ ದಾರಿ ತಪ್ಪಿಸುತ್ತಿದ್ದಾರೆ. ದೇಶದ ಎಲ್ಲ ನಾಗರಿಕರು ಉಚಿತ ಲಸಿಕೆ ಪಡೆಯಬೇಕು. ರಾಜ್ಯದಲ್ಲಿ 3.26 ಕೋಟಿ ಜನ 18 ರಿಂದ 44 ವಯೋಮಾನದವರಿದ್ದಾರೆ. ವ್ಯರ್ಥ ಲಸಿಕೆ ಸೇರಿ ಇವರಿಗೆ ಎರಡು ಡೋಸ್ ಗೆ 7 ಕೋಟಿ ಲಸಿಕೆ ಬೇಕು. 1 ಕೋಟಿ ಲಸಿಕೆ ಪಡೆಯಲು 300 ಕೋಟಿ ರುಪಾಯಿ ಬೇಕು.7 ಕೋಟಿ ಲಸಿಕೆಗೆ 2100 ಕೋಟಿ ಬೇಕಾಗುತ್ತದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಳೆದ ಅಕ್ಟೋಬರ್, ನವೆಂಬರ್ ನಿಂದ ಲಸಿಕೆ ಉತ್ಪಾದಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.
ಹೀಗಾಗಿ ನಮ್ಮ ಪಕ್ಷದ ಶಾಸಕರಿಂದ ಅವರ ಕ್ಷೇತ್ರದ ಅಭಿವೃದ್ಧಿಗೆ ಬರುವ ಅನುದಾನದಲ್ಲಿ ತಲಾ 1 ಕೋಟಿ ರೂಪಾಯಿಯನ್ನು ಲಸಿಕೆ ಖರೀದಿಗೆ ಸಂಗ್ರಹಿಸಲಿದ್ದೇವೆ. ಅದು ಸೇರಿ ಒಟ್ಟು 100 ಕೋಟಿ ರೂ. ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ ಶಾಸಕರು ಜನರಿಗೆ ನೆರವಾಗಲೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ನಾವು ಕೊಡುವುದರಿಂದ ಎಲ್ಲವೂ ಆಗುತ್ತದೆ ಎಂದು ಹೇಳುವುದಿಲ್ಲ. ಆದರೆ ಈ ಪರಿಸ್ಥಿತಿಯಲ್ಲಿ ನಮ್ಮ ಕೈಲಾದ ನೆರವನ್ನು ನಾವು ನೀಡುತ್ತಿದ್ದೇವೆ.
ಸರ್ಕಾರ ಪರೀಕ್ಷೆ ಕಡಿಮೆ ಮಾಡಬಾರದು. ಸಮುದಾಯ ಆಸ್ಪತ್ರೆ ಹಾಗೂ ಇತರೆ ಕಡೆಗಳಲ್ಲಿ ಪರೀಕ್ಷೆ ನಡೆಸುವುದನ್ನು ನಿಲ್ಲಿಸಲಾಗಿದೆ. ರೋಗ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಿದರೆ ಮಾತ್ರ ಸೋಂಕು ತಹಂಬದಿಗೆ ತರಲು ಸಾಧ್ಯ.
ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಪಡಿತರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಬೇಕು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
