ಬೆಳಗಾವಿ: ದಿನ ಬೆಳಗಾದರೆ ಜನ ಬಿಜೆಪಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ – ಡಿ.ಕೆ ಶಿವಕುಮಾರ್.

ಜನ ಸಾಮಾನ್ಯರು ದಿನಬೆಳಗಾದರೆ ಬದುಕು ಬರ್ಬರ ಮಾಡಿರುವ ಬಿಜೆಪಿ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ನೋಡಿಕೊಳ್ಳುತ್ತಾರೆ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಭ್ರಷ್ಟಚಾರದಿಂದ ಬೇಸತ್ತು ಹೋಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಜನ ಸಾಮಾನ್ಯರು ದಿನ ಬೆಳಗಾದರೆ ತಮ್ಮ ಜೀವನದ ಬಗ್ಗೆ ಯೋಚಿಸುತ್ತಾರೆ. ಮಾಧ್ಯಮದವರಾದ ನೀವೇ ತೆಗೆದುಕೊಳ್ಳಿ. 20 ಸಾವಿರ ರುಪಾಯಿ ಸಂಬಳದಲ್ಲಿ ನೀವು ಬದುಕೋಕೆ ಆಗುತ್ತಿದೆಯಾ? ಇಲ್ಲ, ಅಲ್ಲವೇ? ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರವನ್ನು ಜನ ಸಾಮಾನ್ಯರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ಯುವಕರಿಗೆ ಸರ್ಕಾರದಿಂದ ಒಂದು ಉದ್ಯೋಗವೂ ಸಿಕ್ಕಿಲ್ಲ. ನಿನ್ನೆ ಕೆಇಬಿ ಹುಡುಗರು ಸಿಕ್ಕಿದ್ದರು. ನಮ್ಮ ಸರಕಾರದ ಅವಧಿಯಲ್ಲಿ 40 ಸಾವಿರ ಉದ್ಯೋಗ ನೀಡಲಾಗಿತ್ತು. ನಿಮ್ಮಿಂದ ನಾವು ಜೀವನ ಮಾಡುತ್ತಿದ್ದೀವಿ ಎಂದು ಹೇಳಿದರು. ನಮಗೆ ಅಷ್ಟು ಸಾಕು.

ಬೆಲೆ ಏರಿಕೆ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಅಡುಗೆ ಅನಿಲವು ದುಪ್ಪಟ್ಟಾಗಿದ್ದು, ಗೃಹಿಣಿ ದಿನಬೆಳಗಾದರೆ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾಳೆ. ಈ ಹೆಣ್ಣು ಮಕ್ಕಳ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮಾಧ್ಯಮದವರಾದ ನೀವು ನಿಮ್ಮ ವಾಹನಕ್ಕೆ 98, 100 ರೂ. ಕೊಟ್ಟು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದೀರಿ. ನಿಮ್ಮ ಕಚೇರಿಯಲ್ಲಿ ನಿಮಗೆ ಸಂಬಳ ಹೆಚ್ಚಿಸಿದ್ದಾರಾ? ಹೀಗಾಗಿ ಮಾಧ್ಯಮದವರು ಬದಲಾವಣೆ ತರಲು ಬೆಂಬಲ ನೀಡಬೇಕು.
ಪಕ್ಷ ಸಂಘಟನೆಯಲ್ಲಿ ಯಾವುದೇ ಕೊರತೆ ಇಲ್ಲ. ಎಲ್ಲ ನಾಯಕರೂ ಒಟ್ಟಿಗಿದ್ದಾರೆ. ನಮ್ಮ ಪಕ್ಷದಲ್ಲಿ ಉತ್ತಮ ಕಾರ್ಯಕರ್ತರಿದ್ದಾರೆ. ನಾವೆಲ್ಲ ಒಮ್ಮತದಿಂದ ಸತೀಶ್ ಜಾರಕಿಹೊಳಿ ಅವರು ಅಭ್ಯರ್ಥಿಯಾಗಬೇಕು ಎಂದು ಹೇಳಿದೆವು. ಅದನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಅಧಿಕಾರದಲ್ಲಿಲ್ಲದಿದ್ದರೂ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಕಾರ್ಖಾನೆ ಆರಂಭಿಸಿ ಉದ್ಯೋಗ ಕೊಟ್ಟಿದ್ದಾರೆ. ಜನಸೇವೆ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ ಅವರು ನನಗೆ ಸೇವಾದಳ ತರಬೇತಿ ಕಾರ್ಯಕ್ರಮ ಉಸ್ತುವಾರಿ ಕೊಡಿ ಎಂದಷ್ಟೇ ನನ್ನ ಬಳಿ ಕೇಳಿದರು. ತರಬೇತಿ ಎಂದರೆ ಜನಕ್ಕೆ ಜ್ಞಾನ ಕೊಡುವಂತದ್ದು, ನಾಯಕರನ್ನು ಬೆಳೆಸುವಂತದ್ದು, ವಿಚಾರ ಬೆಳೆಸಸುವಂತದ್ದು. ಎಷ್ಟು ನಾಯಕರು ಈ ಕೆಲಸ ಮಾಡಿದ್ದಾರೆ? ಎಲ್ಲರೂ ತಮಗೆ ಇಂತಹುದೇ ಉಸ್ತುವಾರಿ ಬೇಕು ಎಂದು ಕೇಳುತ್ತಾರೆ. ಇವರಿಗೂ ಕೆಲವು ಉಸ್ತುವಾರಿ ಕೊಟ್ಟಿದ್ದೇವೆ, ಅದು ಬೇರೆ ವಿಚಾರ. ಅವರಾಗಿ ಕೇಳಿದ್ದು ಮಾತ್ರ ತರಬೇತಿ ಜವಾಬ್ದಾರಿ.
ಇಂತಹ ಪ್ರಬಲ ನಾಯಕನಿಗೆ ನಾವು ಟಿಕೆಟ್ ಕೊಟ್ಟಿರುವುದಕ್ಕೆ ಒಂದು ಸಣ್ಣ ಅಪಸ್ವರವೂ ಇಲ್ಲ. ಇದೇ ನಮ್ಮ ಶಕ್ತಿ. ಯುವಕರು, ಮಹಿಳೆಯರು, ಎಲ್ಲ ವರ್ಗದ ಜನ ನಮ್ಮ ಪಕ್ಷದ ಆಸ್ತಿ. ನಿನ್ನೆ ಆರ್.ವಿ. ದೇಶಪಾಂಡೆ ಅವರ ಉಸ್ತುವಾರಿಯಲ್ಲಿ ಸಭೆ ನಡೆಸಲಾಗಿತ್ತು. ನಾಯಕರಾದ ಎಂ.ಬಿ. ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಅವರು ಈ ಚುನಾವಣೆ ಮಾಡಲಿದ್ದಾರೆ. ನಾವು ಹಾಗೂ ಸಿದ್ದರಾಮಯ್ಯ ಅವರು ಮೂರು ಕ್ಷೇತ್ರಗಳಿಗೂ ಪ್ರವಾಸ ಮಾಡಬೇಕಾಗುತ್ತದೆ. ಹೀಗಾಗಿ ಇಲ್ಲಿ ನಮ್ಮ ನಾಯಕರುಗಳು ಕ್ಯಾಂಪ್ ಹಾಕಿದ್ದಾರೆ.
ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ:
ಜೈನ ಧರ್ಮಮಗುರುಗಳು ನೀವು ಮುಂದೆ ಸಿಎಂ ಆಗುತ್ತೀರಿ ಎಂದು ಆಶೀರ್ವಾದ ಮಾಡಿದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಹಿರಿಯರು, ಧರ್ಮಗುರುಗಳ ಆಶೀರ್ವಾದದಿಂದಲೇ ನಾವು ಬದುಕುತ್ತಿದ್ದೇವೆ. ನನಗೆ ಎಲ್ಲ ಧರ್ಮಗಳ ಬಗ್ಗೆಯೂ ನಂಬಿಕೆ ಇದೆ. ಜೈನ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಅಪಾರ ನಂಟಿದೆ. ಈ ಹಸ್ತದ ಗುರುತಿನ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಧರ್ಮಗುರುಗಳು ಮಾರ್ಗದರ್ಶನ ನೀಡಿದ್ದ ಇತಿಹಾಸವಿದೆ’ ಎಂದು ತಿಳಿಸಿದರು.
‘ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರು ಜೈನ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿ, ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಸಹಾಯ ಮಾಡಲಾಗಿದೆ. ಆ ಧರ್ಮ ಪೀಠದವರು ನಮಗೆ ಆಶೀರ್ವಾದ ಮಾಡಿದ್ದಾರೆ. ನನಗೆ ಮುಖ್ಯಮಂತ್ರಿ ಆಗುವುದಕ್ಕಿಂತ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ. ಅವರ ಆಶೀರ್ವಾದ ನಮ್ಮ ಪಕ್ಷಕ್ಕೆ ಬೇಕಿದೆ. ಹೂಗಾಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಬೇಡಿದ್ದೇನೆ’ ಎಂದರು.
ನಾಯಕರ ಜತೆ ಚರ್ಚಿಸಿ ತೀರ್ಮಾನ:
ಅಶೋಕ್ ಪೂಜಾರಿ ಅವರು ನನ್ನ ಜತೆ ಮಾತನಾಡಿದ್ದು, ಇಂದು ಆಗಮಿಸುತ್ತಿದ್ದಾರೆ. ನಾನು ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಸಿಡಿ ವಿಚಾರವಾಗಿ ನನ್ನನ್ನು ಕೇಳಬೇಡಿ:
ನಾನು ಸದ್ಯ ಸಿಡಿ ವಿಚಾರವಾಗಿ ಮಾತನಾಡುವುದಿಲ್ಲ. ಚುನಾವಣೆ ಮುಖ್ಯ, ಮೊದಲು ಅದನ್ನು ಮುಗಿಸೋಣ. ಸಿಡಿ ವಿಚಾರದಲ್ಲಿ ಕಾನೂನಿದೆ, ಮತ್ತೊಂದಿದೆ. ಚುನಾವಣೆ ಮುಗಿದ ನಂತರ ಈ ಬಗ್ಗೆ ಯೋಚಿಸೋಣ.
ವಿಘ್ನ ನಿವಾರಕ ವಿನಾಯಕನಿಗೆ ಪ್ರಾರ್ಥನೆ:
ನಮ್ಮ ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ. ಹಿಂಡಲಗಾ ಗಣಪತಿ ದೇವಾಲಯ ಬಹಳ ಪ್ರಾಚೀನ ಹಾಗೂ ಪವಿತ್ರ ಸ್ಥಳ. ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವವನು ವಿನಾಯಕ. ಇಂದು ರಾಜ್ಯಕ್ಕೆ ಆಗುತ್ತಿರುವ ವಿಘ್ನ, ರಾಷ್ಟ್ರಕ್ಕೆ ಆಗುತ್ತಿರುವ ವಿಘ್ನ ನಿವಾರಣೆಯಾಗಿ ನೆಮ್ಮದಿ, ಶಾಂತಿ ಕೊಡಬೇಕು ಎಂದು ವಿಘ್ನರಾಜನಲ್ಲಿ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿದ್ದೇನೆ. ನಾಳೆ ಬಸವಕಲ್ಯಾಣದಲ್ಲಿ ನಾಮಪತ್ರ ಸಲ್ಲಿಕೆ ಆಗಲಿದೆ.
ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕು ಏರುಪೇರಾಗುತ್ತಿದ್ದು, ರಾಜ್ಯಕ್ಕೆ ತೊಂದರೆ ಎದುರಾಗಿದೆ. ಉದ್ಯಮಗಳು ಖಾಲಿಯಾಗಿವೆ, ದರ್ಜಿಗಳು, ನೇಕಾರರು ಎಂಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲ ಧರ್ಮದವರಿಗೂ ಈ ಸಮಸ್ಯೆಗಳು ಎದುರಾಗಿದ್ದು, ಮನಸ್ಸಿಗೆ ಶಾಂತಿ ಇಲ್ಲವಾಗಿದೆ. ಅದಕ್ಕಾಗಿ ದೇಶ ಹಾಗೂ ರಾಜ್ಯದಲ್ಲಿ ಒಂದು ಪ್ರಬಲ ವಿರೋಧ ಪಕ್ಷ ಇರಬೇಕು. ಹೀಗಾಗಿ ಒಂದು ಲೋಕಸಭೆ, ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಡಬೇಕು ಎಂದು ದೇವರಲ್ಲಿ ಹಾಗೂ ಮತದಾರರಲ್ಲಿ ಪ್ರಾರ್ಥನೆ ಮಾಡುತ್ತೇನೆ.

ವರದಿ: ಸಿಸಿಲ್ ಸೋಮನ್

