ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಮೂವರು ವಿದೇಶಿ ಪ್ರಜೆಗಳು ಹಾಡಹಗಲೇ ಕೊಕೇನ್ ಮತ್ತು ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ನೈಜೀರಿಯಾ ಮೂಲದ ಅಕಾರಿಕ ಆಂಥೋನಿ, ಏಜುಪೋಮಾ ಎಚುಕ್ವೊ, ಓಗೋಕ್ವು ಫ್ರಾನ್ಸಿಸ್ ಬಂಧಿತರು. ಮೂವರು ಆರೋಪಿಗಳು ಬೈಯ್ಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಸದಾನಂದ ಪಾರ್ಕ್ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಹಲಸೂರು ಎಸಿಪಿ ನೇತೃತ್ವದ ತಂಡ ಪಾರ್ಕ್ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಆರೋಪಿಗಳ ಬಳಿ 173 ಗ್ರಾಂ ಕೊಕೇನ್, 50 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದ್ದು, ಪೊಲೀಸರು ಜಪ್ತಿ ಮಾಡಿ ಮೂವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ಆರೋಪಿಗಳು ತ್ರಿಪುರ ಮೂಲದ ವ್ಯಕ್ತಿಯೋರ್ವನಿಂದ ಡ್ರಗ್ಸ್ ಖರೀದಿ ಮಾಡಿ ಅದನ್ನು ವಿದ್ಯಾರ್ಥಿಗಳು ಮತ್ತು ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
