ಕಲಬುರಗಿ: ಬಿಜೆಪಿ ಸರ್ಕಾರಗಳು ರಾಜ್ಯದ ಜನರ ಸಮಸ್ಯೆಬಗ್ಗೆ ಚಿಂತಿಸದೇ ಕೇವಲ ಭಾವನಾತ್ಮಕ ವಿಚಾರವಾಗಿ ರಾಜಕೀಯ ಮಾಡುತ್ತಿವೆ. ಹೀಗಾಗಿ ಜನ ಈ ಸರ್ಕಾರಗಳ ಮೇಲೆ ಬೇಸತ್ತಿದ್ದು, ಪ್ರಬಲ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ (ಮಲ್ಲಮ್ಮ) ಅವರು ನಾಮಪತ್ರ ಸಲ್ಲಿಸುವ ಮುನ್ನ ಇಲ್ಲಿನ ಸರಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:

‘ನಾನು ನಮ್ಮ ಶಾಸಕಾಂಗ ಪಕ್ಷದ ನಾಯಕರು ಬಸವವಕಲ್ಯಾಣಕ್ಕೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಭಾಗಯಾಗಲಿದ್ದೇವೆ. ಅಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಜನತಾದಳದವರು ನಮ್ಮ ಪಕ್ಷದಲ್ಲಿದ್ದವರನ್ನು ಕರೆದು ಮುಸಲ್ಮಾನ ಅಭ್ಯರ್ಥಿಯನ್ನು ಹಾಕಿದ್ದಾರೆ. ಅದು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಮುಂದೆ ನೋಡೋಣ. ಎಲ್ಲ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಎಲ್ಲ ನಾಯಕರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ. ಶಾಸಕರಾಗಿ ಕೆಲಸ ಮಾಡುತ್ತಿದ್ದವರ ಧರ್ಮಪತ್ನಿಗೆ ಟಿಕೆಟ್ ಕೊಟ್ಟಿರುವುದರಿಂದ ಎಲ್ಲರೂ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ. ಮತದಾರರು ಕೂಡ ನಾರಾಯಣರಾವ್ ಅವರಿಗೆ ಕೊಟ್ಟ ಮತ ಐದು ವರ್ಷಕ್ಕೆ ಪೂರ್ಣವಾಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.
ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಕೊರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಯಾರಿಗೂ ನೆರವಾಗಲಿಲ್ಲ, ಯುವಕರಿಗೆ ಉದ್ಯೋಗ ಸಿಗಲಿಲ್ಲ, ಬ್ಯಾಂಕುಗಳಿಂದ ಜನರಿಗೆ ಯಾವುದೇ ಅನುಕೂಲ ಸಿಗಲಿಲ್ಲ, ತೆರಿಗೆ ಹೆಚ್ಚಾಯ್ತು, ಅಡುಗೆ ಅನಿಲ, ದಿನಸಿ ಪದಾರ್ಥ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳಿಗೆ ಸಂಕಷ್ಟ ಹೆಚ್ಚಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೀಗಾಗಿ ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ. ಬಿಜೆಪಿ ಸರ್ಕಾರದ ಈ ವೈಫಲ್ಯಗಳೇ ನಮಗೆ ಅನುಕೂಲ ಮಾಡಿಕೊಡುತ್ತದೆ. ಸರ್ಕಾರ ಎಲ್ಲ ಹಂತದಲ್ಲೂ ವಿಫಲವಾಗಿದೆ. ಪ್ರಜಾಪ್ರಭುತ್ವ ಬಂದಮೇಲೆ ಮೊದಲ ಬಾರಿಗೆ ಸರ್ಕಾರ ಇಷ್ಟುಮಟ್ಟಿಗೆ ವೈಫಲ್ಯ ಅನುಭವಿಸಿದ್ದು, ಜನರೇ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಕೊರೋನಾ ವಿಚಾರದಲ್ಲಿ ಅವರ ಕೈಯಲ್ಲಿ ಅಧಿಕಾರ ಇದೆ. ಅವರ ತೀರ್ಮಾನ ಅವರಿಗೆ ಬಿಡುತ್ತೇವೆ. ನಾವು ಕೊಟ್ಟ ಸಲಹೆಗಳನ್ನು ಅವರು ಸ್ವೀಕರಿಸಿಲ್ಲ. ಅವರು ಜನರ ಸಂಕಷ್ಟಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸುತ್ತಿಲ್ಲ. ಕೇವಲ ಭಾವನಾತ್ಮಕ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ.
ಸಿಡಿ ವಿಚಾರವಾಗಿ ಮಾತನಾಡಲ್ಲ:
ಸಿಡಿ ವಿಚಾರವಾಗಿ ನಾನು ಏನು ಹೇಳಬೇಕೋ ಎಲ್ಲವನ್ನು ಹೇಳಿದ್ದೀನಿ. ನಾನಿಲ್ಲಿಗೆ ಚುನಾವಣೆ ಮಾಡಲು ಬಂದಿದ್ದೀನಿ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ನಾವು ರಾಜಕೀಯದಲ್ಲಿದ್ದೇವೆ, ಈ ರೀತಿ ಸಹಜ. ಅವರು ಮಾಡಿದರು ಅಂತಾ ನಾವು ಮಾಡಲು ಹೋಗುವುದಿಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ನಾನು ನಮ್ಮ ಎಲ್ಲ ಕಾರ್ಯಕರ್ತರಲ್ಲೂ ಮನವಿ ಮಾಡುತ್ತೇನೆ. ಬಿಜೆಪಿಯವರ ಸಂಸ್ಕೃತಿಯನ್ನು ಜನ ಗಮನಿಸುತ್ತಿದ್ದಾರೆ. ನೀವೆಲ್ಲ ಶಾಂತ ರೀತಿಯಿಂದ ಇರಬೇಕು. ರಾಜಕೀಯದಲ್ಲಿ ಹೂವಿನ ಹಾರ ಹಾಕುತ್ತಾರೆ, ಜೈಕಾರ ಹಾಕುತ್ತಾರೆ, ಕಲ್ಲು, ಮೊಟ್ಟೆ ಹೊಡೆಯುವವರೂ ಇರುತ್ತಾರೆ. ನಾವದನ್ನು ಕ್ರೀಡಾಸ್ಫೂರ್ತಿಯಿಂದ ನೋಡಬೇಕು. ಎಲುಬಿಲ್ಲದ ನಾಲಿಗೆ ಅಂತಾ ಅವರು ಬೇಕಾದಹಾಗೆ ಮಾತನಾಡುತ್ತಾರೆ. ನಾವದಕ್ಕೆ ತಲೆಕೆಡಿಸಿಕೊಳ್ಳೋದು ಬೇಡ. ನಮ್ಮ ಕೆಲಸ ಜನರ ವಿಶ್ವಾಸ ಗಳಿಸಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು, ಆ ಬಗ್ಗೆ ಗಮನಹರಿಸೋಣ.
ನಾನು ಸಿಡಿ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಎಸ್ ಐಟಿ ಅವರು ಏಕೆ ವಿಚಾರಣೆಗೆ ಕರೆಯುತ್ತಾರೆ. ಒಂದುವೇಳೆ ಕರೆದರೂ ನನಗೆ ಏನುಗೊತ್ತಿದೆಯೋ ಹೇಳುತ್ತೇನೆ. ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಅಂತೀನಿ. ಅವರ ವಿಚಾರಣೆಗೆ ಬೇಕಾದ ಎಲ್ಲ ಸಹಕಾರ ಕೊಡುತ್ತೇನೆ.
ಕಲ್ಯಾಣ ಕರ್ನಾಟಕಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇವೆ:
ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಹೋರಾಟ ಮಾಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ಸಿಗುವಂತೆ ಮಾಡಿದ್ದರು. ಆದರೆ ಈ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ. ಸರ್ಕಾರದಿಂದ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಅವರ ಪಕ್ಷದವರೇ ಹೇಳುತ್ತಿದ್ದಾರೆ.

ವರದಿ: ಸಿಸಿಲ್ ಸೋಮನ್

