ಸಾಗರ: ಎಲ್ಲಾ ದುಡಿವ ವರ್ಗಕ್ಕೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

ಎಲ್ಲಾ ದುಡಿವ ವರ್ಗಕ್ಕೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು
ದುಡಿವ ಕೈಗಳೇ ದೇಶದ ಅಭಿವೃದ್ಧಿಗೆ ಕಾರಣ. ಇವರಿಗೆ ಈ ದಿನ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ಅವರ ಕಾರ್ಪಣ್ಯಗಳು ಕರಗಿ ಅವರ ಕುಟುಂಬಗಳು ಸಂತಸದ ಗೂಡಾಗಲಿ ಎಂದು ಆಶಿಸುತ್ತಾ “ಶ್ರಮದ ಯಾತ್ರೆ” ಎನ್ನುವ ಕವಿತೆ ಬರೆದಿರುವೆ.

ಪ್ರಸ್ತುತದಲ್ಲಿ ದೇಶ ಎದುರಿಸುತ್ತಿರುವ ಕೋರೋನ ಎನ್ನುವ ಮಹಾಮಾರಿಯ ಆಪತ್ತಿನ ನಡುವೆಯೂ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸರಿಗೂ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುವೆ.
ಶ್ರಮದ ಯಾತ್ರೆ
ದುಡಿವ ಕೈಗಳು ಬೇಡುವ ಕೈಗಳಾಗದಿರಲಿ
ನ್ಯಾಯದ ಕೂಳು ಕಳ್ಳಸಂತೆ ಸೇರದಿರಲಿ
ಅನ್ನಭಾಗ್ಯವು ಬಡವನ ಕುಟೀರ ತಲುಪಲಿ
ಹಸಿದ ಹೊಟ್ಟೆಯು ಗಂಜಿಯಾದರು ಸವಿಯಲಿ
ಶ್ರಮಿಕನ ಕಣ್ಣೀರಿಗೆ ಬೊಗಳೆ ಮಾತುಗಳೆ ಉತ್ತರವಾಗದಿರಲಿ
ನಿಜನಾಯಕರೆ ನಾಡಿನೆಲ್ಲೆಡೆ ಮುಂದಾಳಾಗಲಿ
ಕಾರ್ಪಣ್ಯ ಕರಗಿಸುವ ಪಣವು ಕಾಯಕವಾಗಲಿ
ಕಾಯಕದ ನಡಿಗೆಯು ಸಾರ್ಥಕ್ಯದ ಪಥವಾಗಲಿ
ಭರವಸೆ ಆಶ್ವಾಸನೆಗಳು ಭಾಷಣವಾಗಿಯೆ ಉಳಿಯದಿರಲಿ
ಕೊಟ್ಟ ಮಾತಿಗೆ ಮನಮಿಡಿಯುವ ಗುಣವು ಬೆಳೆಯಲಿ
ಅಧಿಕಾರದ ಗದ್ದುಗೆಯಲಿ ಕುಳಿತವರು
ಗತಿಸಿಹೋಗುವ ಅವಧಿಯೊಳಗೆ ಸತ್ಕಾರ್ಯವ ಮೊಳಗಿಸಲಿ
ಒಂದೆಡೆ ಹಸಿದ ಹೊಟ್ಟೆಯ ಯಾತನೆ
ಇನ್ನೊಂದೆಡೆ ಭ್ರಷ್ಟರ ದುರ್ವರ್ತನೆ
ಯೋಜನೆಗಳ ಫಲದ ಬುತ್ತಿಯ ಸವಿಯು
ಬಡವನ ನಾಲಿಗೆಗೆ ಎಟುಕುವುದೆಂದು?
ಉಳ್ಳವರು ಬಡವರ ಅನ್ನ ಲೂಟಿಗೈಯ್ಯುವುದು ತಡೆಯುವುದೆಂದು?
ಕಳ್ಳಸಂತೆಕೋರರ ಸಂಪತ್ತು ಸಮಾಜದ ಸ್ವತ್ತಾಗುವುದೆ
ಧನಿಕನ ಎದೆಯಲಿ ಕುರುಣೆಯು ಅರಳುವುದೆ
ಬಡವನ ಮನೆಯು ಜಗಮಗಿಸುವ ದೀಪಾವಳಿಯಾಗದಿದ್ದರು ಸರಿಯೆ
ಮೂರೊತ್ತು ಗಂಜಿಗೆ ಬರವಿಲ್ಲದ ಆಲಯವಾಗುವುದೆ?
ಬೆವರು ಹನಿಗಳು ವ್ಯರ್ಥದ ಹೊಳೆಯಾಗದಿರಲಿ
ನಿಸ್ವಾರ್ಥದ ಮನಗಳು ನಾಡಿನೆಲ್ಲೆಡೆ ಬೆಸೆಯಲಿ
ಶ್ರಮದ ಯಾತ್ರೆಗೆ ವೈಭವದ ಯಶ ಲಭಿಸಲಿ
ಭವ್ಯದ ನಾಡಿಗೆ ಸಾರಥಿಗಳಿವರೆ ಗೌರವಿಸಿ

ಲೇಖನೆ: ರಾಮಚಂದ್ರ ಸಾಗರ್
