ಪ್ರತಿಪಕ್ಷಗಳ ವಿರೋಧದಿಂದಾಗಿ ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗದೆ ನಿರರ್ಥಕಗೊಂಡ ಮೂರು ವಿವಾದಿತ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ, ಕೈಗಾರಿಕಾ ವಿವಾದಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿಂದು ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿ ಮಸೂದೆಗಳ ಬಗ್ಗೆ ಚರ್ಚೆಯಾಗಿದ್ದು, ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯಬಾರದು ಎಂದು ಎರಡನೇ ಬಾರಿಗೆ ಸುಗ್ರೀವಾಜ್ಞೆ ಮೂಲಕ ಮಸೂದೆಗಳನ್ನು ಜಾರಿಗೆ ತರಲು ನಿರ್ಣಯಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡರೂ ವಿಧಾನ ಪರಿಷತ್ತಿನಲ್ಲಿ ತಡರಾತ್ರಿ ಒಂದು ಗಂಟೆಯವರೆಗೂ ಚರ್ಚೆ ನಡೆಯಿತಾದರೂ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಸಂಖ್ಯಾಬಲ ಹೆಚ್ಚಿದ್ದರಿಂದ ಕೈಗಾರಿಕಾ ವಿವಾದಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ಮಸೂದೆಗೆ ಸೋಲಾಯಿತು.
ಉಳಿದಂತೆ ಎಪಿಎಂಸಿ ಮತ್ತು ಭೂ ಸುಧಾರಣೆ ಮಸೂದೆಗಳು ಚರ್ಚೆಯಾದರೂ ಅಂಗೀಕಾರಗೊಳ್ಳದೇ ಅವೇಶನ ಅನಿರ್ದಿಷ್ಠಾವಗೆ ಮುಂದೂಡಿಕೆಯಾಯಿತು.
ಆದರೆ ಕೆಳಮನೆಯಲ್ಲಿ ಸಂಖ್ಯಾಬಲದ ಮೂಲಕ ಮಸೂದೆಗಳನ್ನು ಅಂಗೀಕರಿಸಲಾಯಿತಾದರೂ, ಮೇಲ್ಮನೆಯಲ್ಲಿ ಸಾಧ್ಯವಾಗಲಿಲ್ಲ. ಮುಂದಿನ ಅವೇಶನ ಶುರುವಾಗುವುದರೊಳಗೆ 6 ತಿಂಗಳ ಕಾಲಾವಕಾಶ ಮುಗಿದಿರುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಮೂಲಕ ನಿರ್ಜೀವವಾಗಿದ್ದ ಮಸೂದೆಗಳನ್ನು ಜೀವಂತವಾಗಿಡಲು ನಿರ್ಧರಿಸಿದೆ.
