ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳ ಸಾರಾಂಶ.
‘ಬಿಜೆಪಿ ಸರ್ಕಾರ ಜನರಿಗೆ ಕೋವಿಡ್ ಸೋಂಕನ್ನು ಉಡುಗೊರೆಯಾಗಿ ಕೊಟ್ಟಿದೆ. ಆರಂಭದಲ್ಲೇ ವಿದೇಶದಿಂದ ಬಂದವರನ್ನು ನಿಯಂತ್ರಿಸಿದ್ದರೆ ಸೋಂಕು ತಡೆಯಬಹುದಿತ್ತು. ಕೋವಿಡ್ ಬರುತ್ತಿದೆ ಎಂದು ರಾಹುಲ್ ಗಾಂಧಿ ಅವರು ಎಚ್ಚರಿಕೆ ಕೊಟ್ಟರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.
ಈ ಸರ್ಕಾರ ಬಂದ ಮೇಲೆ ಜನರನ್ನು ಪ್ರತಿ ವಿಚಾರದಲ್ಲೂ ಕ್ಯೂ ನಿಲ್ಲಿಸಿದ್ದಾರೆ. ಬ್ಯಾಂಕಿನಲ್ಲಿ ಹಣ ಪಡೆಯಲು ಕ್ಯೂ, ಆಸ್ಪತ್ರೆ ಸೇರಲು, ಆಕ್ಸಿಜನ್, ರೆಮಡಿಸಿವಿರ್, ಲಸಿಕೆ ಪಡೆಯಲು ಕ್ಯೂ ಕಡೇಗೆ ಸ್ಮಶಾಣದಲ್ಲಿ ಶವಸಂಸ್ಕಾರಕ್ಕೂ ಕ್ಯೂ ನಿಲ್ಲುವಂತಾಯಿತು.
ಜನ ಕೋವಿಡ್ ನಿಂದ ಪರದಾಡುತ್ತಿದ್ದರೆ, ಒಬ್ಬ ಮಂತ್ರಿ, ಶಾಸಕರೂ ಮನೆ ಬಿಟ್ಟು ಆಚೆ ಬರಲಿಲ್ಲ. ಸರ್ಕಾರ ಎಂದರೆ ನೀವೊಬ್ಬರೇ ಅಲ್ಲ, ನಿಮ್ಮ ಸಚಿವರು ಅಧಿಕಾರಿಗಳನ್ನು ಜಿಲ್ಲೆಗಳಿಗೆ ಕಳುಹಿಸಿ, ಆಸ್ಪತ್ರೆಗೆ ಹೋಗಿ ಸೋಂಕಿತರ ಯೋಗಕ್ಷೇಮ ವಿಚಾರಿಸಲಿ ಎಂದು ನಾನು ಹೇಳಿದ 15 ದಿನಗಳ ನಂತರ ನಾಲ್ಕೈದು ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿ ಸಭೆ ನಡೆಸಿದರು.
ಕಳೆದ ವರ್ಷ ಆಶಾ ಕಾರ್ಯಕರ್ತೆಯರು ಧರಣಿ ಕೂತಾಗ, ಯಡಿಯೂರಪ್ಪನವರ ಮನೆ ಮುಂದೆ ಹೋಗಿ ಧರಣಿ ಕೂರೋಣ ಎಂದಾಗ 3 ಸಾವಿರ ಘೋಷಣೆ ಮಾಡಿದರು. ಇನ್ನು ಚಾಲಕರಿಗೆ, ಅಸಂಘಟಿತ ಕಾರ್ಮಿಕರು, ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರಿಗೆ 10 ಸಾವಿರ ರೂ. ಪರಿಹಾರ ನೀಡಿ ಅಂತಾ ಆಗ್ರಹಿಸಿದೆವು. ಆದರೆ ಸರ್ಕಾರ 5 ಸಾವಿರ ಪರಿಹಾರ ಘೋಷಿಸಿತು. ಆದರೆ ಯಾರಿಗೂ ಸರಿಯಾಗಿ ನೀಡಲಿಲ್ಲ.
ಈ ವರ್ಷವೂ ಪರಿಹಾರ ನೀಡುವಂತೆ ಆಗ್ರಹಿಸಿದೆವು. ಈ ಬಾರಿ 3 ಸಾವಿರ ಘೋಷಿಸಿದರು. ಯಾರಿಗಾದರೂ ಸರ್ಕಾರದಿಂದ ಹಣ ಬಂತಾ? ಯಾರಿಗೂ ಬಂದಿಲ್ಲ.
ನಮ್ಮ ನಾಯಕರು ಈಗ ಕೊಡುವ ಆಹಾರ ಕಿಟ್, ತರಕಾರಿಗಳಿಂದ ನಿಮ್ಮ ಜೀವನ ಸಾಗುವುದಿಲ್ಲ. ಆದರೆ ಕಷ್ಟ ಕಾಲದಲ್ಲಿ ನಿಮ್ಮ ಜತೆ ನಾವು ಇದ್ದೇವೆ ಎಂದು ಧೈರ್ಯ ತುಂಬಲು, ರೈತರಿಗೆ ಮಾರುಕಟ್ಟೆ ಕಲ್ಪಿಸಿ, ಆತ ಬೆಳೆದ ಬೆಳೆ ಮಾರಾಟವಾಗಲಿ ಅಂತಾ ನಾವು ಈ ತರಕಾರಿ, ಆಹಾರ ಕಿಟ್ ನೀಡುತ್ತಿದ್ದೇವೆ.
ಸರ್ಕಾರ ರೈತರಿಗೆ ಹೆಕ್ಟೇರ್ ಗೆ 10 ಸಾವಿರ ಪರಿಹಾರ ಘೋಷಿಸಿದೆ. ಅಲ್ಲಿಗೆ ಎಕರೆಗೆ 4 ಸಾವಿರದಂತೆ ಕುಂಟೆಗೆ 100 ರೂ. ಪರಿಹಾರ ನೀಡಲಾಗುತ್ತದೆ. 10-20 ಕುಂಟೆಗಳಲ್ಲಿ ತರಕಾರಿ ಬೆಳೆದವರು, ಹೂವು ಬೆಳೆದವರು ಪರಿಹಾರಕ್ಕೆ ಅರ್ಜಿ ಹಾಕುತ್ತಾರಾ? ನಮ್ಮ ನಾಯಕರು ರೈತರ ಪಟ್ಟಿ ಮಾಡಿ ಅವರಿಂದ ಅರ್ಜಿ ಹಾಕಿಸಿ ಪರಿಹಾರ ಸಿಗುವಂತೆ ಮಾಡಬೇಕು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರು. ಯಾರಿಗಾದರೂ ಸಿಕ್ಕಿತಾ? ಅದನ್ನು ಯಾರು ತಿಂದರೋ?
ಲಸಿಕೆ ವಿಚಾರಕ್ಕೂ ನಾವು ಹೋರಾಟ ಮಾಡಬೇಕಾಯಿತು. ನಮ್ಮ ಶಾಸಕರ ನಿಧಿಯಿಂದ 100 ಕೋಟಿ ರುಪಾಯಿ ಕೊಡುತ್ತೇವೆ ಅಂತಾ ಹೇಳಿದೆವು. ಆದರೆ ಅವರು ಬೇಡ ಅಂದರು. ಅನುಮತಿ ಕೊಟ್ಟರೆ, ನಾವು ಟೆಂಡರ್ ಕರೆದಾಗ ಲಸಿಕೆ ಎಷ್ಟಕ್ಕೆ ಸಿಗುತ್ತದೆ ಅಂತಾ ಗೊತ್ತಾಗುತ್ತದೆ ಎಂದು ಬೇಡ ಎಂದರು. ಈ ಸರ್ಕಾರ ಎಲ್ಲದರಲ್ಲೂ ಹಣ ಮಾಡಲು ಮುಂದಾಗಿದೆ.
ಕೊರೋನಾದಿಂದ ಸತ್ತವರ ಲೆಕ್ಕವೇ ಇಲ್ಲವಾಗಿದೆ. ನಾನು ಗಲಾಟೆ ಮಾಡಿ ಪಂಚಾಯಿತಿ ನಾಯಕರಿಗೆ ಪಟ್ಟಿ ಕೊಡಿ ಎಂದು ಕೇಳಿದ್ದೇನೆ. ಈಗ ಯಡಿಯೂರಪ್ಪನವರು ಕೆಲವು ಮೃತರಿಗೆ 1 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇಷ್ಟು ದಿನ ಯಾಕೆ ಘೋಷಿಸಲಿಲ್ಲ? ಚಾಮರಾಜನಗರದಲ್ಲಿ ಏನಾಯ್ತು?
ಪೆಟ್ರೋಲ್ 100 ರೂ. ಆಗಿದೆ. 35 ರುಪಾಯಿ ಪೆಟ್ರೋಲ್ ಗೆ 65 ರು. ತೆರಿಗೆ ಹಾಕಲಾಗಿದೆ. ಇದರಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಚಾಲಕರ ಸ್ಥಿತಿ ಏನಾಗಬೇಕು? ಇದನ್ನು ನಿಯಂತ್ರಿಸಲು ಕಾಂಗ್ರೆಸ್ ಹೋರಾಡುತ್ತಿದೆ. ನಿಮ್ಮೆಲ್ಲರ ಆಶಿರ್ವಾದ ಕಾಂಗ್ರೆಸ್ ಪಕ್ಷಕ್ಕೆ ಇರಲಿ. ನಿಮ್ಮ ಸೇವೆ ನಾವು ಮಾಡುತ್ತೇವೆ. ಚುನಾವಣೆ ಒಂದೇ ಮುಖ್ಯವಲ್ಲ. ನಿಮ್ಮ ಬದುಕಿನಲ್ಲಿ ನಾವು ಜತೆಯಾಗಿ ನಿಲ್ಲುತ್ತೇವೆ.’

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
