ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಅಪೇಕ್ಷೆ ಹೊಂದಿರುವ ಜೆಡಿಎಸ್ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.ಉಪಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಚುನಾವಣಾ ಕಾರ್ಯತಂತ್ರ ರೂಪಿಸಲು ಅಣಿಯಾಗಿರುವ ಜೆಡಿಎಸ್ ಪಕ್ಷ ಅಭ್ಯರ್ಥಿಗಳ ಆಯ್ಕೆ ಕಸರತ್ತನ್ನೂ ಆರಂಭಿಸಿದೆ.
ಈ ವಾರಾಂತ್ಯದೊಳಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಕಟ ಮಾಡುವ ನಿರೀಕ್ಷೆಯಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಎರಡೂ ಕ್ಷೇತ್ರಗಳು ಜೆಡಿಎಸ್‍ಗೆ ಪ್ರತಿಷ್ಠೆಯಾಗಿರುವುದರಿಂದ ಎಲ್ಲಾ ದೃಷ್ಟಿಕೋನದಿಂದಲೂ ಸಮರ್ಥವಾದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಜೆಡಿಎಸ್ ವರಿಷ್ಠರು ನಿರತರಾಗಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಬಿ.ಸತ್ಯನಾರಾಯಣ ಅವರ ಕುಟುಂಬದವರು ಅಲ್ಲದೆ ಇತರೆ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಈಗಾಗಲೇ ಎರಡು ಮೂರು ಸುತ್ತಿನ ಸಮಾಲೋಚನೆಯನ್ನು ಈ ಕ್ಷೇತ್ರದ ಮುಖಂಡರ ಜೊತೆ ನಡೆಸಿದ್ದಾರೆ.
ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಗೆ ಸರಿಸಮಾನಾಗಿ ಪೈಪೋಟಿ ನೀಡುವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶವಿದೆ. ಈಗ ಕ್ಷೇತ್ರದಲ್ಲಿ ಏಳೆಂಟು ಮಂದಿ ಟಿಕೆಟ್ ಆಕಾಂಕ್ಷಿಗಳು ಇರುವುದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೊನೆ ಗಳಿಗೆಯಲ್ಲಿ ಜೆಡಿಎಸ್ ಯಾರತ್ತ ಒಲವು ತೋರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
