ನವದೆಹಲಿ(ಸೆಪ್ಟೆಂಬರ್ 30): ರಿಲಯನ್ಸ್ ಇಂಡಸ್ಟ್ರೀಸ್ನ ಅಂಗವಾದ ರಿಲಾಯನ್ಸ್ ರೀಟೇಲ್ಗೆ ಮೂರನೇ ಹೂಡಿಕೆಯಾಗಿ 3,675 ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ರಿಲಯನ್ಸ್ ರೀಟೇಲ್ನ ಶೇ. 0.84 ಪಾಲನ್ನು ಜನರಲ್ ಅಟ್ಲಾಂಟಿಕ್ ಸಂಸ್ಥೆ ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಫ್ಯೂಚರ್ ರೀಟೇಲ್ ಎಂಬ ಎದುರಾಳಿ ಸಂಸ್ಥೆಯನ್ನು ಖರೀದಿಸಿದ್ದ ರಿಲಾಯನ್ಸ್ ರೀಟೇಲ್ಗೆ ಜನರಲ್ ಅಟ್ಲಾಂಟಿಕ್ ಜೊತೆಗಿನ ಒಪ್ಪಂದ ಇನ್ನಷ್ಟು ಪುಷ್ಟಿ ಕೊಟ್ಟಂತಾಗಿದೆ. ಈ ಮೊದಲು ಜಿಯೋ ಪ್ಲಾಟ್ಫಾರ್ಮ್ ಮೇಲೆ ಹೂಡಿಕೆ ಮಾಡಿದ್ದ ವಿಶ್ವದ ಅತ್ಯಂತ ದೊಡ್ಡ ಟೆಕ್ ಇನ್ವೆಸ್ಟರ್ ಸಿಲ್ವರ್ ಲೇಕ್ ರಿಲಯನ್ಸ್ ರಿಟೇಲ್ ಕ್ಷೇತ್ರದ ಶೇ. 1.75 ಷೇರನ್ನು 7,500 ಕೋಟಿ ರೂಪಾಯಿಗೆ ಪಡೆದುಕೊಂಡಿತ್ತು. ಇದಾದ ಬೆನ್ನಲ್ಲೇ ಕೆಕೆಆರ್ ಕೂಡ 5,550 ಕೋಟಿ ರೂ. ಹೂಡಿಕೆ ಮಾಡಿತ್ತು. ಈಗ ಜನರಲ್ ಅಟ್ಲಾಂಟಿಕ್ ಹೂಡಿಕೆ ಮಾಡಿದ್ದು, ಇದರಿಂದ ರಿಲಯನ್ಸ್ ರಿಟೇಲ್ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ರಿಟೇಲ್ ಮೇಲೆ ಮತ್ತಷ್ಟು ಹೂಡಿಕೆ ಪಡೆಯುವ ನಿರೀಕ್ಷೆಯಲ್ಲಿ ರಿಲಯನ್ಸ್ ಇದೆ. ಈ ಮೂಲಕ ರಿಟೇಲ್ ಉದ್ಯಮವನ್ನು ಮತ್ತಷ್ಟು ವಿಸ್ತರಣೆ ಮಾಡಿ ಅಮೆಜಾನ್ಗೆ ನೇರ ಪೈಪೋಟಿ ನೀಡುವ ಆಲೋಚನೆಯಲ್ಲಿ ರಿಲಯ್ಸ್ ಇದೆ.
ಅಂದಹಾಗೆ ಜನರಲ್ ಅಟ್ಲಾಂಟಿಕ್ ಇದು ರಿಲಯನ್ಸ್ ಮೇಲೆ ಎರಡನೇ ಹೂಡಿಕೆ ಆಗಿದೆ. ಮೇ ತಿಂಗಳಲ್ಲಿ ಜನರಲ್ ಅಟ್ಲಾಂಟಿಕ್ 6,598 ಕೋಟಿ ರೂಪಾಯಿಯನ್ನು ರಿಲಯನ್ಸ್ ಜಿಯೋ ಮೇಲೆ ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ರಿಟೇಲ್ ಉದ್ಯಮಕ್ಕೂ ಜನರಲ್ ಅಟ್ಲಾಂಟಿಕ್ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್ನ ಹಲವು ವ್ಯವಹಾರಗಳನ್ನ ಖರೀದಿ ಮಾಡಿತ್ತು. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್ನ ರೀಟೇಲ್, ವೋಲ್ಸೇಲ್, ಲಾಜಿಸ್ಟಿಕ್ಸ್, ವೇರ್ಹೌಸಿಂಗ್ ವ್ಯವಹಾರಗಳನ್ನ ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಘೋಷಿಸಿತ್ತು.
ಫ್ಯೂಚರ್ ಗ್ರೂಪ್ನ ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಬೆಲೆ ನಿಗದಿ ಮಾಡದೇ ಒಟ್ಟಿಗೆ ಲಂಪ್ಸಮ್ ಆಗಿ ಎಲ್ಲಾ ವ್ಯವಹಾರಗಳನ್ನ ರಿಲಾಯನ್ಸ್ ಖರೀದಿಸಿ ವಹಿಸಿಕೊಂಡಿದೆ. ಮೇಲೆ ತಿಳಿಸಿದ ವ್ಯವಹಾರಗಳನ್ನ ಹೊಂದಿರುವ ಫ್ಯೂಚರ್ ಗ್ರೂಪ್ನ ಕಂಪನಿಗಳು ಫ್ಯೂಚರ್ ಎಂಟರ್ಪ್ರೈಸಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ವಿಲೀನಗೊಳ್ಳಲಿವೆ.