ಹಾನಗಲ್: ಮಸೀದಿಯಲ್ಲೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ – ಮುನೀರ್ ಅಹ್ಮದ್

ಕ್ರಾಂತಿಕಾರಿ ಹೆಜ್ಜೆ ಇಟ್ಟ ಹಾನಗಲ್ ಶಾಫಿ ಮಸೀದಿ
ಅಲ್ ಹಿದಾಯ ಎಜುಕೇಷನ್ ಟ್ರಸ್ಟ್ ಹಾನಗಲ್, ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ಹಾನಗಲ್ ಆಫ್ ಕ್ಯಾಂಪಸ್ ಇವರ ಆಶ್ರಯದಲ್ಲಿ ಮಂಗಳೂರಿನ ಯೇನಪೊಯ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಯೇನಪೊಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮವು ಹಾನಗಲ್ಲಿನ ಅಲ್ ಹಿದಾಯ ಶಾಫಿ ಜುಮಾ ಮಸ್ಜಿದ್ ನಲ್ಲಿ ಆದಿತ್ಯವಾರದಂದು ನಡೆಯಿತು.

ಸಮಾರಂಭವನ್ನು ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರವರು ಆರೋಗ್ಯ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಆರೋಗ್ಯ ಸಿಬ್ಬಂದಿಗಳಾದ ಫಕೀರಮ್ಮ,ಸುಜಾತ, ಝಹೂರಾಬಿ, ರಾಘವೇಂದ್ರ ಎಂಬವರನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹರೇಕಳ ಹಾಜಬ್ಬ” ನಾನೊಬ್ಬ ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಮಾರುತ್ತಿದ್ದ ಸಾಮಾನ್ಯ ಮನುಷ್ಯ. ಒಂದು ರೂಪಾಯಿಗೂ ಬೆಲೆ ಇಲ್ಲದವ. ನನ್ನ ಶಾಲೆ ಕಟ್ಟುವ ಕಾರ್ಯದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಋಣಿಯಾಗಿದ್ದೇನೆ. ನಾನು ಯಾವುದೇ ಪ್ರಶಸ್ತಿಗಾಗಿ ಕೆಲಸ ಮಾಡಿದವನಲ್ಲ. ಆದರೂ ಕೇಂದ್ರ ಸರಕಾರ ನನ್ನ ಚಿಕ್ಕ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಉದ್ಯಮಿ ಎಚ್ ಕೆ ಎಚ್ ಅಬ್ದುಲ್ ಕರೀಂ ಹಾಜಿ ಅವರು ಬಹಳಷ್ಟು ಉತ್ತಮ ಕೆಲಸಗಳನ್ನು ಶಿರಸಿ ಮತ್ತು ಹಾನಗಲ್ ನಲ್ಲಿ ಮಾಡುತ್ತಿದ್ದಾರೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ*. ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಹಿದಾಯ ಎಜುಕೇಶನ್ ಟ್ರಸ್ಟ್ ಹಾನಗಲ್ ಇದರ ಅಧ್ಯಕ್ಷ ಹಾಜಿ ಕೆ ಅಬ್ದುಲ್ ಕರೀಮ್ ಎಚ್ ಕೆ ಎಚ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ಎಂ ಬಿ ಕಲಾಲ್ ಮಾತನಾಡುತ್ತಾ ” ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ತುಂಬಾ ಸಂತಸವಾಗಿದೆ.ಇದರಿಂದ ಆ ಪ್ರಶಸ್ತಿಗೆ ತೂಕ ಬಂದಿದೆ. ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ಕೊಡುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ”. ಎಂದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿ ರಫೀಕ್ ಮಾಸ್ಟರ್ ಮಂಗಳೂರು ಮಾತನಾಡುತ್ತಾ” ಮಸೀದಿ ಅಂದರೆ ಕೇವಲ ಅಲ್ಲಾಹನಿಗೆ ಪ್ರಾರ್ಥನೆ ಮಾಡುವ ಸ್ಥಳ ಮಾತ್ರವಲ್ಲ. ಅದು ಎಲ್ಲರ ಅಭಿವೃದ್ಧಿಯ ಕೇಂದ್ರ. ಪ್ರವಾದಿ ಮುಹಮ್ಮದರು ತನ್ನ ಮದೀನಾ ಮಸೀದಿಯನ್ನು ಸಮುದಾಯದ ಅಭಿವೃದ್ಧಿ ಕೇಂದ್ರವಾಗಿ ರೂಪಿಸಿದ್ದರು. ಹಾನಗಲ್ಲಿನ ಶಾಫಿ ಮಸೀದಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸೇವೆಯನ್ನು ಒದಗಿಸಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜು, ಯೇನಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ಲಕ್ಷ್ಮೀಶ ಉಪಾಧ್ಯಾಯ, ಎಕ್ಸಿಕ್ಯುಟಿವ್ ಇಂಜಿನಿಯರ್ ಇಮ್ತಿಯಾಜ್ ಅಹ್ಮದ್ ಖಾಜಿ, ಸಮಾಜ ಸೇವಕ ಮರಿಗೌಡ ಪಾಟೀಲ್, ಶಿರಸಿಯ ಸಮಾಜ ಸೇವಕ ಡಾ. ಮೆಹಬೂಬ್ ಮುಲ್ಲಾ, ಸಮಾಜ ಸೇವಕ ಆದರ್ಶ ಶೆಟ್ಟಿ, ಬಾಳಾರಾಮ್ ಗುರ್ಲಹೊಸೂರು, ಯೇನಪೊಯ ಮೆಡಿಕಲ್ ಕಾಲೇಜಿನ ಶಿಬಿರ ಸಂಯೋಜಕ ಅಬ್ದುಲ್ ರಜಾಕ್, ಹಾಜಿ ಅಬ್ದುಲ್ ನಜೀರ್, ಹಾಜಿ ಅಬ್ದುಲ್ ಮಜೀದ್ ಎಚ್ ಕೆ ಎಚ್ ಸಾಗರ , ರಾಮು ಯಳ್ಳೂರ ಮೊದಲಾದವರು ಭಾಗವಹಿಸಿದ್ದರು. ಹಾನಗಲ್ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಪ್ರಾಂಶುಪಾಲ ಶಫೀಕ್ ಹುದವಿ ಪ್ರಾರ್ಥನೆಗೈದರು. ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ರವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಶಿಬಿರದಲ್ಲಿ ಡಾಕ್ಟರ್ ಮೆಹಬೂಬ್ ಮುಲ್ಲಾ ಶಿರಸಿ, ಯೇನಪೊಯ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ.ಲಕ್ಷ್ಮೀಶ ಉಪಾಧ್ಯಾಯ, ಡಾ.ವಾಸುದೇವ, ಡಾ. ಬಾಲಕೃಷ್ಣ, ಡಾ.ಸೂರಜ್, ಡಾ. ಶ್ರೇಯಾ, ಶಿಬಿರ ಸಂಯೋಜಕ ಅಬ್ದುಲ್ ರಜಾಕ್ ಮೊದಲಾದವರು ಭಾಗವಹಿಸಿದ್ದರು.
ಡಾ. ಮೆಹಬೂಬ್ ಮುಲ್ಲಾ ಶಿರಸಿ ಸ್ವಾಗತಿಸಿದರು. ಮಹಮ್ಮದ್ ಶರೀಫ್ ಮಂಗಳೂರು ಧನ್ಯವಾದಗೈದರು. ರಫೀಕ್ ಮಾಸ್ಟರ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
