ಬೆಂಗಳೂರು: ಉಪಚುನಾವಣೆಯ ಫಲಿತಾಶ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾದುದಲ್ಲ – ಡಿ.ಕೆ. ಶಿವಕುಮಾರ್.
ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:
ಉಪಚುನಾವಣೆಯ ಫಲಿತಾಶ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಇಡೀ ಭಾರತದಲ್ಲಿ ಬದಲಾವಣೆಯ ಅಲೆ, ಬಿರುಗಾಳಿ ಪ್ರಾರಂಭವಾಗಿದೆ. ಬಿಜೆಪಿ ಎಷ್ಟು ಕ್ಷೇತ್ರ ಗೆದ್ದಿದೆಯೋ ಅಷ್ಟೇ ಕಾಂಗ್ರೆಸ್ ಕೂಡ ಪಡೆದುಕೊಂಡಿದೆ. ಪ್ರಾದೇಶಿಕ ಪಕ್ಷಗಳು ಕೂಡ ತಮ್ಮದೇ ಆದ ಪ್ರಾಬಲ್ಯ ತೋರಿವೆ. ಆದರೆ ಬಿಜೆಪಿ ನಿರೀಕ್ಷೆಯಂತೆ ಅವರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆಗೆ ಜನಾಭಿಪ್ರಾಯ ವ್ಯಕ್ತವಾಗಿದ್ದು, ಕಾಂಗ್ರೆಸ್ ಮತದಾರರ ತೀರ್ಪನ್ನು ಗೌರವಿಸುತ್ತದೆ.
ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಹಾಗೂ ನಾಯಕರು ತಮ್ಮದೇ ಆದ ಪ್ರಯತ್ನ ಮಾಡಿದರು. ನಮ್ಮ ಸ್ವಾಭಿಮಾನಿ ಮತದಾರರು ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಧೈರ್ಯವಾಗಿ ಕಾಂಗ್ರೆಸ್ ಧ್ವಜ ಹಿಡಿದು ದೇಶಕ್ಕೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಹಾನಗಲ್ ಹಾಗೂ ಸಿಂದಗಿ ಕ್ಷೇತ್ರದ ಮತದಾರರಿಗೆ ಅಭಿನಂದಿಸುತ್ತೇನೆ. ಅವರು ಅಭಿಮಾನದಿಂದ ಕೊಟ್ಟಿರುವ ಮತವನ್ನು ವಿರೋಧ ಪಕ್ಷವಾಗಿ ಉಳಿಸಿಕೊಂಡು, ಅವರ ಮಾರ್ಗದರ್ಶನದಂತೆ ಜನಪರ ಸೇವೆ ಮಾಡುತ್ತೇವೆ.
ಮನಗೂಳಿ ಅವರ ಜತೆ ಬಂದ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಜತೆ ಬೆರೆತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಯಾರ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ. ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ನಮ್ಮ ಮತ ಪ್ರಮಾಣ ಹೆಚ್ಚಾಗಿದ್ದು, ಸಮಾಧಾನ ತಂದಿದೆ’ ಎಂದರು.
ಎಂ.ಸಿ. ಮನಗೂಳಿ ಅವರಂತೆ ಅಶೋಕ್ ಮನಗೂಳಿ ವೈಯಕ್ತಿಕ ವರ್ಚಸ್ಸು ಮುಂದುವರಿಸುವಲ್ಲಿ ವಿಫಲರಾದರೇ? ಎಂಬ ಪ್ರಶ್ನೆಗೆ ‘ಇಲ್ಲಿ ವ್ಯಕ್ತಿಗಳ ವಿಚಾರ ಮುಖ್ಯವಲ್ಲ. ಪಕ್ಷ ಚಿಹ್ನೆ, ನೀತಿ, ಸಿದ್ಧಾಂತದ ಮೇಲೆ ನಾವು ಚುನಾವಣೆ ಮಾಡಿದ್ದೇವೆ. ಹೀಗಾಗಿ ಕಳೆದ ಚುನಾವಣೆಗೂ, ಈ ಬಾರಿ ಚುನಾವಣೆಗೂ ಹೋಲಿಕೆ ಮಾಡಿದಾಗ ಕಾಂಗ್ರೆಸ್ ಪ್ರಬಲವಾಗಿ ಬೆಳೆದಿದೆ’ ಎಂದು ಉತ್ತರಿಸಿದರು.
ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದ್ದೇವೆ ಎಂಬ ಮನಸ್ಥಿತಿ ಬಿಡಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ‘ಆಯಿತು, ಅವರು ದೊಡ್ಡವರು. ಅವರು ಹೇಳಿದಂತೆ ಕೇಳೋಣ’ ಎಂದು ತಿರುಗೇಟು ಕೊಟ್ಟರು.
ಇದು ಕಾಂಗ್ರೆಸ್ ಗೆಲುವಲ್ಲ, ವೈಯಕ್ತಿಕ ವರ್ಚಸ್ಸಿನ ಮೇಲಿನ ಗೆಲವು ಎಂಬ ಯಡಿಯೂರಪ್ಪನವರ ಹೇಳಿಕೆಗೆ, ‘ಬಹಳ ಸಂತೋಷ’ ಎಂದರು.
ಉಪಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುತ್ತಾ? ಎಂಬ ಪ್ರಶ್ನೆಗೆ, ‘ಅವರ ಪಕ್ಷದಲ್ಲಿ ಬೇಕಾದಷ್ಟು ಚರ್ಚೆ ನಡೆಯುತ್ತದೆ. ಯಾರು ಚುನಾವಣೆ ಜವಾಬ್ದಾರಿ ತೆಗೆದುಕೊಂಡು ಅಲ್ಲಿ ಕೂತಿದ್ದರು. ಹಾನಗಲ್ ನಲ್ಲಿ ಯಾರು, ಎಷ್ಟು ಮಂತ್ರಿಗಳು ಕೂತಿದ್ದರು. ಬಿಜೆಪಿ ಸಿದ್ಧಾಂತ ಇಟ್ಟುಕೊಂಡವರು ಏನಾಗಿದ್ದರು ಎಂಬುದು ಅವರಿಗೆ ಬಿಟ್ಟ ವಿಚಾರ. ನಾನು ಅದರಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಮತದಾರ ತೀರ್ಪು ಕೊಟ್ಟಿದ್ದು, ಬಿಜೆಪಿಯವರು ಆಡಿರುವ ಮಾತುಗಳನ್ನು ನೀವು ತೋರಿಸಿದ್ದೀರಿ, ಎಲ್ಲರೂ ಕೇಳಿದ್ದಾರೆ’ ಎಂದು ಉತ್ತರಿಸಿದರು.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಮಾತಿನ ಸಮರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚುನಾವಣೆ ಸಂದರ್ಭದಲ್ಲಿ ನಮ್ಮ ಹೇಳಿಕೆ ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಯಾರ ಮನಸ್ಸನ್ನೂ ನೋಯಿಸಲು ನಮಗೆ ಇಷ್ಟವಿಲ್ಲ. ಯಾರ ವಿರುದ್ಧವೂ ವೈಯಕ್ತಿಕವಾಗಿ ಮಾತನಾಡಲು ಆಸಕ್ತಿ ಇಲ್ಲ. ಕೆಲವರ ವೈಯಕ್ತಿಕ ಅಭಿಪ್ರಾಯಗಳು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸುತ್ತೇನೆ’ ಎಂದರು.
ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಂತರಿಕ ಕಚ್ಚಾಟ ಕಾಂಗ್ರೆಸ್ ಗೆ ವರವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಮುಖ್ಯಮಂತ್ರಿ ಕ್ಷೇತ್ರವೋ, ಪಕ್ಕದ ಕ್ಷೇತ್ರವೋ, ನಾಯಕತ್ವ ವಿಚಾರವೋ, ಆಂತರಿಕ ಕಚ್ಚಾಟವೋ ಗೊತ್ತಿಲ್ಲ. ನಮ್ಮ ಹೋರಾಟ ಪಕ್ಷ, ನೀತಿ, ಸಿದ್ಧಾಂತ, ಆಡಳಿತ, ಅವರು ಜನರಿಗೆ ಸ್ಪಂದಿಸಿದರಾ ಇಲ್ಲವಾ? ಕೊಟ್ಟ ಮಾತು ಉಳಿಸಿಕೊಂಡರಾ ಇಲ್ಲವಾ? ಎಂಬುದರ ಮೇಲೆ. ಅದಕ್ಕೆ ಜನ ಮತ ನೀಡಿದ್ದಾರೆ’ ಎಂದು ತಿಳಿಸಿದರು.
ದೀಪಾವಳಿ ಶುಭಾಶಯಗಳು:
‘ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ಕಳೆದ ಒಂದೂವರೆ ವರ್ಷದಿಂದ ಎಲ್ಲರೂ ಕಷ್ಟದಲ್ಲಿ ನರಳುತ್ತಿದ್ದಾರೆ. ಕರ್ನಾಟಕ ಕತ್ತಲಲ್ಲಿದೆ. ಸರ್ಕಾರ ಯಾರಿಗೂ ಸ್ಪಂದಿಸಲಿಲ್ಲ. ಈ ವರ್ಷವಾದರೂ ಎಲ್ಲರಿಗೂ ಬೆಳಕು ಸಿಗಲಿ. ಜೀವ ಇದ್ದರೆ ಜೀವನ. ಹೀಗಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ’ ಎಂದರು.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.