ನವೆಂಬರ್ 3ರಂದು ಶಿರಾ ಹಾಗೂ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಮೈತ್ರಿಯ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನಾಯಕರು ಈಗಾಗಲೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ನಮ್ಮ ಪಕ್ಷದಿಂದ ಏಕಾಂಗಿ ಸ್ಪರ್ಧೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಆರ್.ಆರ್. ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕುತಂತ್ರಕ್ಕೆ ಪ್ರತಿತಂತ್ರ ಸಿದ್ಧವಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗೆ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವುದು ಸವಾಲಿನ ಕೆಲಸವಾಗಿದೆ. ಹೀಗಿದ್ದರೂ ನಾವು ಮಾನಸಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
