ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆಯಲ್ಲಿ ಅಧಿಕ ಮಳೆಯಾಗಿದೆ. ಬಾಗಲಕೋಟೆಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ 10 ಮನೆಗಳು ಕುಸಿದುಬಿದ್ದಿವೆ. ನಿರಂತರವಾಗಿ ಮಳೆ ಸುರಿದ ಕಾರಣದಿಂದ ನಿನ್ನೆ ನಡುರಾತ್ರಿಯೇ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದಾಗಿ ಹುನಗುಂದ, ಇಳಕಲ್ ತಾಲೂಕಿನಲ್ಲಿ ಹಳ್ಳಗಳು ಮೈತುಂಬಿ ಹರಿಯುತ್ತಿವೆ. ಬೀದರ್ನ ಬಾಲ್ಕಿ, ಔರಾದ್ ಹಾಗೂ ಕಮಲನಗರದಲ್ಲಿ ನಿನ್ನೆ ಮಳೆಯಾಗಿದೆ. ಇದರಿಂದ ಬೀದರ್ನ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು.
ಇಂದಿನಿಂದ ಅಕ್ಟೋಬರ್ 3ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾದ್ದರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದೆ. ಇದರಿಂದಾಗಿ ಇನ್ನೂ 2-3 ದಿನಗಳ ಕಾಲ ಮಳೆ ಮುಂದುವರೆಯಲಿದೆ. ಇಂದಿನಿಂದ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಲಿದ್ದು, ಸಾಧಾರಣ ಮಳೆ ಬೀಳಲಿದೆ. ನಿನ್ನೆ ಬೆಂಗಳೂರು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ.
