ಸಾಗರ: ಅಮೆರಿಕ, ಯೂರೋಪ್ ದೇಶಗಳಲ್ಲಿ ಕೊರೊನಾ ನಾಲ್ಕನೇ ಅಲೆ; ಭಾರತ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆಯೇ?
ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆಯೆ?
ಎರಡನೇ ಅಲೆಯ ಅಪಾರ ಸಂಕಷ್ಟಗಳ ನಂತರ ಭಾರತದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದೆ. ಕೊರೊನಾ ಹೆಸರು ಹೇಳಿ ದೇಶವನ್ನೇ ಭಯಭೀತರನ್ನಾಗಿಸಿದ್ದ ’ಮನರಂಜನಾ ಸುದ್ದಿ’ ಮಾಧ್ಯಮಗಳಿಗೆ ಬಿಸಿಬಿಸಿಯಾದ ಬೇರೆ ವಿಷಯಗಳು ಕಾಲಕಾಲಕ್ಕೆ ಸಿಗುವುದರಿಂದ ಅವುಗಳಿಗೆ ಕೊರೊನಾ ಈಗ ಹಳೆಯ ವಿಷಯವಾಗಿದೆ. ದೇಶದ ಹಲವೆಡೆಗಳಲ್ಲಿ, ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಬಿಟ್ಟುಬಿಟ್ಟಿದ್ದಾರೆ. ಒಂದನೆ ಅಲೆಯ ಪ್ರಭಾವ ಕಡಿಮೆಯಾಗುತ್ತಿದ್ದಂತೆಯೇ ದೇಶದ ಪ್ರಧಾನಿಗಳು ನಾವು ಕೊರೊನಾ ಗೆದ್ದುಬಿಟ್ಟಿದ್ದೇವೆ ಎಂದು ಬೀಗಿದ್ದರು. ತಜ್ಞರ ಎಚ್ಚರಿಕೆಯ ಹೊರತಾಗಿಯು ಆಡಳಿತ ಅದನ್ನು ಗಂಭೀರವಾಗಿ ಪರಿಗಣಿಸದೇ ಇರದ ಪರಿಣಾಮ ಕೊರೊನಾ ಎರಡನೇ ಅಲೆಯಲ್ಲಿ ಜನರು ಭಾರಿ ತೊಂದರೆಗೆ ಸಿಲುಕಿದರು.
ಇದೀಗ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಯುರೋಪ್, ಅಮೆರಿಕ, ರಷ್ಯಾ ಮತ್ತು ಚೀನಾದಲ್ಲಿ ಮತ್ತೆ ಕೊರೊನಾ ಸುದ್ದಿಯಾಗುತ್ತಿದೆ. ಅದರಲ್ಲೂ ಜರ್ಮನಿಯಲ್ಲಿ ಕೊರೊನಾ ಸೋಂಕಿನ ನಾಲ್ಕನೇ ಅಲೆ ಶರುವಾಗಿದೆ ಎಂದು ವರದಿಯಾಗುತ್ತಿದೆ. ಅಲ್ಲೀಗ ದಿನಕ್ಕೆ ಸರಾಸರಿ 39 ಸಾವಿರದಷ್ಟು ಕೊರೊನಾ ಸೋಂಕು ವರದಿಯಾಗುತ್ತಿದೆ. ಐಸಿಯುಗಳು ತುಂಬಿವೆ ಎನ್ನುತ್ತವೆ ಜರ್ಮನಿ ದೇಶದ ವರದಿಗಳು, ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಇತ್ತ ಕಡೆ ಕೊರೊನಾ ವೈರಸ್ ಮೊದಲು ಕಂಡುಬಂದ ಚೀನಾದಲ್ಲೂ ಸೋಂಕು ಹೆಚ್ಚಾಗುತ್ತಿದೆ.
ಜರ್ಮನಿ ತನ್ನ ದೇಶದ 67.5% ಜನರಿಗೆ ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ಈಗಾಗಲೆ ನೀಡಿದೆ. ಅಮೆರಿಕಾ ಕೂಡಾ 58.8% ಜನರಿಗೆ ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ನೀಡಿದೆ. ಇಷ್ಟಾಗಿಯು ಆ ದೇಶಗಳಲ್ಲಿ ಮತ್ತೆ ಕೊರೊನಾ ಅಲೆ ಎದುರುಗೊಂಡಿದೆ. ಈ ಎಲ್ಲದರ ನಡುವೆ ನಮ್ಮ ದೇಶದಲ್ಲೂ ಮೂರನೇ ಅಲೆ ಬಂದೇಬರಲಿದೆ ಎಂಬುದು ತಜ್ಞರ ಅಭಿಮತ. ಅದಕ್ಕೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಸಜ್ಜಾಗಿದೆಯೇ? ಒಂದು ಮತ್ತು ಎರಡನೆ ಅಲೆಯಲ್ಲಿ ನಡೆದ ತಪ್ಪುಗಳು ಮರುಕಳಿಸದಂತೆ ಸರ್ಕಾರಗಳು ಸಿದ್ಧವಾಗುತ್ತಿವೆಯೆ? ಜಾಗತಿಕವಾಗಿ ಕೊರೊನಾ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಲೇಬೇಕಿದೆ. ಇಲ್ಲವೆಂದರೆ ಕಾಲ ಮಿಂಚಿಹೋಗಲಿದೆ.
ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆಯೆ?
ಕೊರೊನಾ ತಡೆಗೆ ಲಾಕ್‌ಡೌನ್, ಸೀಲ್ಡೌನ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಹೊರತಾಗಿಯು ಸೋಂಕಿಗೆ ಅಂತಿಮ ಪರಿಹಾರ ಲಸಿಕೆಯೊಂದೇ ಆಗಿದೆ ಎಂದು ಸರ್ಕಾರ ಈಗಾಗಲೆ ಹೇಳಿಕೊಂಡಿದೆ. ದೇಶದಲ್ಲಿ ಜನವರಿ 16ರಂದು ಪ್ರಾರಂಭವಾದ ಕೊರೊನಾ ವಿರುದ್ಧದ ಲಸಿಕಾ ಕಾರ್ಯಕ್ರಮಕ್ಕೆ ಭರ್ತಿ ಹತ್ತು ತಿಂಗಳು ತುಂಬಿದೆ. ವಿಶ್ವದ ಅತ್ಯಂತ ದೊಡ್ಡ ಲಸಿಕಾ ಉತ್ಪಾದಕ ದೇಶವಾದ ಭಾರತದಲ್ಲಿ ಕೊರೊನಾ ಲಸಿಕೆಯ ಎರಡು ಡೋಸ್ ಪಡೆದುಕೊಂಡಿರುವುದು 26.8% (37 ಕೋಟಿ) ಜನರಷ್ಟೆ. ವಿಶ್ವದಾದ್ಯಂತ ಒಟ್ಟು 41.2% (321 ಕೋಟಿ) ಜನರು ಈಗಾಗಲೆ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಸಂಖ್ಯೆಗೆ ಹೋಲಿಸಿದರೆ ಭಾರತದ ವ್ಯಾಕ್ಸಿನೇಷನ್ ತುಂಬಾ ನಿಧಾನವಾಗಿ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಜಾಗತಿಕ ಆರೋಗ್ಯ ಮತ್ತು ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಂಶೋಧಕರಾಗಿರುವ ಡಾ. ಹಿಮಾಂಶು ಅವರು ಹೇಳುವಂತೆ, “ಕಳೆದ ಜುಲೈವರೆಗೂ ದೇಶದ ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿತ್ತು. ಅದರ ನಂತರ ಈ ಪ್ರಕ್ರಿಯೆಯಲ್ಲಿ ತುಸು ಚೇತರಿಕೆ ಕಂಡಿದೆ”.
ಭಾರತದಲ್ಲಿ ಈಗಾಗಲೆ 3.44 ಕೋಟಿ ಜನರಿಗೆ ಕೊರೊನಾ ಸೋಂಕು ಬಂದಿದೆ ಎಂದು ಅಧಿಕೃತವಾಗಿ ವರದಿಯಾಗಿದೆ. 4.64 ಲಕ್ಷ ಜನರು ಸೋಕಿನಿಂದ ಮೃತಪಟ್ಟಿದ್ದಾರೆ. ಈ ಸಂಖ್ಯೆ ನಿಖರವಾದದ್ದಲ್ಲ, ಇನ್ನು ಹೆಚ್ಚು ಎಂದು ಹಲವಾರು ಮಾಧ್ಯಮಗಳು ತಮ್ಮ ವರದಿಗಳಲ್ಲಿ ಈಗಾಗಲೆ ಉಲ್ಲೇಖಿಸಿವೆ. ಪ್ರಸ್ತುತ ದೇಶದಲ್ಲಿ 1.4 ಲಕ್ಷ ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ. ಜೊತೆಗೆ ಈ ವಾರದ ಸರಾಸರಿಯಂತೆ ಪ್ರತಿದಿನ 11 ಸಾವಿರದಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಅಕ್ಟೋಬರ್ ಮೊದಲ ವಾರ ಇದು 22 ಸಾವಿರದಷ್ಟು ಇತ್ತು. ಅಂದರೆ ದೇಶದಲ್ಲಿ ಪ್ರಕರಣದ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನಬಹುದಾಗಿದೆ.
ಯುರೋಪ್‌ನ ಕೆಲವು ದೇಶಗಳಲ್ಲಿ ಪ್ರಕರಣ ಗಂಭೀರವಾಗಿ ಹೆಚ್ಚುತ್ತಾ ಇರುವುದರಿಂದ ನಮ್ಮ ದೇಶದಲ್ಲೂ ಮತ್ತೊಂದು ಅಲೆ ಬರಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಡಾ. ಹಿಮಾಂಶು ಅವರ ಪ್ರಕಾರ “ಖಂಡಿತವಾಗಿಯು, ದೇಶದಲ್ಲಿ ಮತ್ತೊಂದು ಅಲೆ ಬರುತ್ತದೆ. ಆದರೆ ಅದರ ಪ್ರಭಾವ ಕಡಿಮೆ ಇರಬಹುದು ಎನ್ನುವುದು ನನ್ನ ಅನಿಸಿಕೆ. ಅಕಸ್ಮಾತ್ ಮುಂದಿನ ಅಲೆಯಲ್ಲಿ ಬರುವಂತಹ ರೂಪಾಂತರಿ ವೈರಸ್ ಲಸಿಕೆಯನ್ನು ಮೀರಿಸುತ್ತದೆ ಎಂದರೆ, ಆ ಸಮಯದಲ್ಲಿ ಏನೂ ಮಾಡಲು ಆಗುವುದಿಲ್ಲ. ಜೊತೆಗೆ ದೇಶದಲ್ಲಿ ಒಟ್ಟಾರೆಯಾಗಿ ಕೇವಲ 26% ಜನಕ್ಕೆ ಲಸಿಕೆ ಸಂಪೂರ್ಣಗೊಂಡಿದೆ. ಈ ಪ್ರಮಾಣವು ಒಂದು ಅಲೆಯನ್ನು ತಡೆಯುವಷ್ಟು ಶಕ್ತಿ ಹೊಂದಿಲ್ಲ. ಕನಿಷ್ಠ 6% ರಿಂದ 65% ಜನರಿಗೆ ವ್ಯಾಕ್ಸಿನೇಷನ್ ಆಗಿದ್ದರೆ ಇನ್ನೊಂದು ಅಲೆಯ ಪ್ರಭಾವವನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ” ಎಂದು ಹೇಳುತ್ತಾರೆ.
“ಜರ್ಮನಿಯಲ್ಲಿ 60%ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದ್ದರೂ ಅಲ್ಲಿ ಮತ್ತೊಂದು ಅಲೆ ಬರುತ್ತಿದೆ. ಅಂದರೆ ಅಲ್ಲಿ ನೀಡಿರುವಂತಹ ಲಸಿಕೆ ಹೊಸ ಅಲೆಗೆ ಬಂದಿರುವ ರೂಪಾಂತರಿ ವೈರಸ್‌ಅನ್ನು ತಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಯುರೋಪ್‌ನಲ್ಲಿ ಮುಂದಿನ ಮೂರು ತಿಂಗಳಲ್ಲಿ ಅಲೆಗಳು ಇನ್ನೂ ತೀವ್ರವಾಗುತ್ತವೆ. ಆದರೆ ಗಂಭೀರತೆಯ ಪ್ರಮಾಣ ಕಡಿಮೆ ಇರಲಿದೆ. ಲಸಿಕೆಯಿಂದ ಇರುವ ಪ್ರಯೋಜನವೆಂದರೆ ಆಸ್ಪತ್ರೆಗಳು ತುಂಬುವುದು ಕಡಿಮಯಾಗುತ್ತದೆ.” ಎಂದು ಅವರು ಹೇಳುತ್ತಾರೆ.
ಡಾ. ಹಿಮಾಂಶು ಅವರು ಮುಂದಿನ ಜೂನ್‌ನಲ್ಲಿ ಮೂರನೆ ಅಲೆ ಬರಬಹುದು ಎಂದು ಅಂದಾಜಿಸುತ್ತಾರೆ. ಅವರು ಹೇಳುವಂತೆ ಈಗ ಜನರ ಓಡಾಟ ಕಡಿಮೆಯಾಗಿರುವುದರಿಂದ ಕೊರೊನಾ ಪ್ರಕರಣ ಕಡಿಮೆಯಾಗಿದೆ. ದೇಶದಲ್ಲಿ ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ಚುನಾವಣೆ ಪ್ರಾರಂಭವಾಗುತ್ತದೆ. ಈ ವೇಳೆ ಹೊಸ ರೂಪಾಂತರಿ ಕೊರೊನಾ ವೈರಸ್ ಹೊರಹೊಮ್ಮುವ ಸಾಧ್ಯತೆಯಿರುತ್ತದೆ. ಸರ್ಕಾರ ಮತ್ತು ಜನರು ಎಚ್ಚರಿಕೆ ವಹಿಸದೆ ವರ್ತಿಸಿದರೆ ಖಂಡಿತವಾಗಿಯೂ ಮುಂದಿನ ಅಲೆಗೆ ಭಾರತ ಸಿದ್ಧವಿರಬೇಕಾಗುತ್ತದೆ. ಎರಡನೆ ಅಲೆಯ ಸಮಯದಲ್ಲಿ ಕೂಡಾ ಹೀಗೆ ಆಗಿತ್ತು ಎಂಬುದು ಹಿಮಾಂಶು ಅವರ ವಾದವಾಗಿದೆ.
“ಕೊರೊನಾದ ಎರಡು ಅಲೆಗಳು ಬಂದಾಗ ಭಾರತದಲ್ಲಿ ಯಾವುದೇ ತಯಾರಿ ಇಲ್ಲದಿದ್ದರಿಂದಲೇ ಹೆಚ್ಚು ಜೀವಹಾನಿ ಸಂಭವಿಸಿತು. ಅದರಲ್ಲೂ ಎರಡನೆ ಅಲೆ ಹೆಚ್ಚು ತೀವ್ರವಾಗಿತ್ತು, ಅಘಾತಕಾರಿಯಾಗಿತ್ತು.
ಅವತ್ತು ಅನುಭವಿಸಿದ ಸಂಕಷ್ಟಗಳು ಮತ್ತು ಭಯಾನಕ ದಿನಗಳನ್ನು ಯಾರೂ ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ. ಆರೋಗ್ಯ ವ್ಯವಸ್ಥೆಯನ್ನು ಕ್ಷೀಣಗೊಳಿಸಿದರ ಪರಿಣಾಮವನ್ನು ಎರಡನೆ ಅಲೆಯಲ್ಲಿ ನಾವು ಮುಖಾಮುಖಿಯಾಗಿ ಕಂಡೆವು. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು” ಎಂದು ಜನಾರೋಗ್ಯ ಚಳವಳಿಯ ಡಾ. ಅಖಿಲಾ ವಾಸನ್ ಹೇಳುತ್ತಾರೆ.
“ಪಾಶ್ಚಾತ್ಯ ದೇಶಗಳಲ್ಲಿ ಇದು ಬೇರೆ ಮಾದರಿಯಲ್ಲಿತ್ತು. ಅಲ್ಲಿ ವಯಸ್ಸಾದವರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಅಲ್ಲಿ ಸಾವಿನ ಪ್ರಮಾಣ ಜಾಸ್ತಿಯಾಗಿತ್ತು. ಆದರೆ ನಮ್ಮ ದೇಶದಲ್ಲಿ ಎರಡನೆ ಅಲೆಯ ಸಮಯ ಎಲ್ಲಾ ವಯಸ್ಸಿನವರೂ ಮೃತಪಟ್ಟರು. ಅದರಲ್ಲೂ ನಮ್ಮ ದೇಶದ ಪ್ರಧಾನ ಮಂತ್ರಿ, ಆರೋಗ್ಯ ಮಂತ್ರಿ ಕೊರೊನಾ ಗೆದ್ದುಬಿಟ್ಟೆವು ಎಂದು ಬೇಜವಾಬ್ದಾರಿಯಿಂದ ಹೇಳಿದ್ದರು. ಇದನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೊಚ್ಚಿಕೊಂಡು ಬಂದರು. ಇದನ್ನು ಬೇಜವಾಬ್ದಾರಿ ಎನ್ನುವುಕ್ಕಿಂತಲೂ, ’ಮಾನವೀಯತೆಯ ವಿರುದ್ಧದ ಅಪರಾಧ’ ಎಂದೂ ಕರೆಯಬಹುದು” ಎಂದ ಡಾ. ಅಖಿಲಾ ಹೇಳುತ್ತಾರೆ.
ಕೊರೊನಾ ವಿರುದ್ಧದ ಲಸಿಕಾ ಅಭಿಯಾನ ಎಲ್ಲಿಯವರೆಗೆ?
ದೇಶದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿ ಹತ್ತು ತಿಂಗಳು ತುಂಬಿದರೂ ದೇಶದ 26.8% ಜನರಿಗಷ್ಟೆ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಎರಡು ಲಸಿಕೆ ಪಡೆದ ಹಲವಾರು ಜನರಿಗೆ ಮತ್ತೆ ಸೋಂಕು ಬಂದಿರುವುದು ಈ ಹಿಂದೆಯೇ ವರದಿಯಾಗಿತ್ತು. ಆದರೆ ಅದು ಗಂಭೀರ ಸ್ವರೂಪದ್ದಾಗಿರಲಿಲ್ಲ ಎಂಬುದಷ್ಟೇ ಸಮಾಧಾನ. ಇಷ್ಟೇ ಅಲ್ಲದೆ ದೇಶದ 18 ವರ್ಷದ ಕೆಳಗಿನ ಮಕ್ಕಳಿಗೆ ಇದುವರೆಗೂ ಯಾವುದೇ ಲಸಿಕೆ ನೀಡಲಾಗುತ್ತಿಲ್ಲ. ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡುವು ಬಗ್ಗೆ ಟ್ರಯಲ್ ಇನ್ನೂ ನಡೆಯುತ್ತಿದೆ. ಆದರೆ ಅಮೆರಿಕ ಮತ್ತು ಯುರೋಪ್‌ನ ಹಲವು ದೇಶಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಈಗಾಗಲೆ ಪ್ರಾರಂಭವಾಗಿದೆ. ಚೀನಾದಲ್ಲಿ 3 ವರ್ಷದ ಮಗುವಿಗೂ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅಲ್ಲಿನ ಬಹುತೇಕ ದೇಶಗಳ ಜನಸಂಖ್ಯೆಯ ಮುಕ್ಕಾಲು ಭಾಗ ಈಗಾಗಲೆ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಅಲ್ಲದೆ ಈಗ ಜರ್ಮನಿಯಲ್ಲಿ ನಾಲ್ಕನೇ ಅಲೆಯಲ್ಲಿ ಸೋಂಕಿನಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವವರು ಲಸಿಕೆ ಪಡೆಯದವರು ಎಂದು ಹೇಳಲಾಗುತ್ತಿದೆ. ಲಸಿಕೆ ವಿರುದ್ಧವಾದ ಅಭಿಪ್ರಾಯ ಜನರ ಒಂದು ವರ್ಗಕ್ಕೆ ಇರುವುದು ಯುರೋಪ್‌ನ ಹಲವು ದೇಶಗಳಲ್ಲಿ ಸಮಸ್ಯೆಗೆ ಕಾರಣವಾಗಿದೆ.
ಕೊರೊನಾ ಲಸಿಕೆಯು ಸೋಂಕಿನಿಂದ ನೂರು ಶೇಕಡ ರಕ್ಷಣೆ ನೀಡುವುದಿಲ್ಲ. ಅದು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಈ ಹಿಂದೆಯೆ ಹೇಳಲಾಗಿತ್ತು. “ಲಸಿಕೆಯು ಸೋಂಕನ್ನು ತಡೆಗಟ್ಟುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಕೊರೊನಾ ಬಂದರೂ ಕೂಡಾ ಅದರ ತೀವ್ರತೆ ಕಡಿಮೆಯಿರುತ್ತದೆ ಎಂಬುದನ್ನು ಹೇಳಿಕೊಂಡೇ ಎಲ್ಲಾ ಲಸಿಕೆಗಳು ಬಂದಿರುವುದು. ಲಸಿಕೆ ತೆಗೆದುಕೊಂಡರೆ ಮತ್ತೆ ಕೊರೊನಾ ಬರುವುದಿಲ್ಲ ಎಂಬುವುದೂ ಇಲ್ಲ” ಎಂದು ಡಾ. ಅಖಿಲಾ ವಾಸನ್ ಹೇಳುತ್ತಾರೆ.
ಇವುಗಳಲ್ಲಿ ಮುಖ್ಯವಾಗಿರುವುದು ಏನೆಂದರೆ, ಈಗ ನೀಡುತ್ತಿರುವ ಎಲ್ಲಾ ಲಸಿಕೆಗಳನ್ನು ನಾವು ಪ್ರಯೋಗಾರ್ಥವಾಗಿಯೆ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವುಗಳ ಪರಿಣಾಮಗಳ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ. ಈ ಲಸಿಕೆಗಳ ಕುರಿತು ಬರುವ ಮಾಹಿತಿಯ ಆಧಾರದಲ್ಲಿ ಮುಂದಕ್ಕೆ ಅವುಗಳನ್ನು ಬದಲಾವಣೆ ಮಾಡಲಾಗುತ್ತದೆ” ಎಂದು ಅಖಿಲಾ ಅಭಿಪ್ರಾಯಪಡುತ್ತಾರೆ.
ಭಾರತದಲ್ಲಿ ಇದೀಗ ಎರಡನೆ ಅಲೆಯ ಪ್ರಭಾವ ಕಡಿಮೆಯಾಗಿದೆ. ಆದರೆ ಜರ್ಮನಿಯಲ್ಲಿ ನಾಲ್ಕನೇ ಅಲೆ ಪ್ರಾರಂಭವಾಗಿದೆ. ಹೀಗಾಗಿ ಭಾರತದಲ್ಲೂ ಹಲವು ಅಲೆ ಬರಲಿದೆ ಎಂಬುದು ತಜ್ಞರ ಅಭಿಪ್ರಾಯ. ಕೊರೊನಾ ತೊಲಗುವುದು ಇನ್ನೂ ದೂರದ ಮಾತು ಎಂಬುದಂತೂ ನಿಜವಾಗಿ ಗೋಚರಿಸುತ್ತಿದೆ. ಈ ಮಧ್ಯೆ ಸಂಪೂರ್ಣ ಎರಡು ಡೋಸ್ ತೆಗೆದುಕೊಂಡಿವವರಿಗೂ ಮತ್ತೊಮ್ಮೆ ಕೊರೊನಾ ಬಂದ ವರದಿಗಳಿವೆ. ಹಾಗಾಗಿ ಮೂರನೇ ಸುತ್ತಿನ ಬೂಸ್ಟರ್ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಅಥವಾ ನಿರಂತರವಾಗಿ ಸೀಸನಲ್ ಆಗಿ ಲಸಿಕೆಯ ಪಡೆಯಬೇಕೆ ಎಂಬ ಪ್ರಶ್ನೆಗಳು ಕೂಡ ಉದ್ಭವಿಸಿದೆ.
“ಸೋಂಕಿನ ಬಗ್ಗೆ ಇನ್ನೂ ಪ್ರಯೋಗಗಳು ನಡೆಯುತ್ತಲೆ ಇರುವುದರಿಂದ, ಮೂರನೇ ಲಸಿಕೆ(ಬೂಸ್ಟರ್) ತೆಗೆದುಕೊಳ್ಳಬೇಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅಖಿಲಾ ಹೇಳಿದರೆ, ಡಾ. ಹಿಮಾಂಶು ಅವರು, “ಬೂಸ್ಟರ್ ಖಂಡಿತಾ ಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಬೂಸ್ಟರ್ ಕೊಡುವ ಸಮಯ ಬಂದಿಲ್ಲ. ಯಾಕೆಂದರೆ, ನಮ್ಮ ದೇಶದಲ್ಲಿ ಈಗಾಗಲೇ ಸಂಪೂರ್ಣ ಲಸಿಕೆ ನೀಡಿರುವುದು ಕೇವಲ27% ಜನರಿಗೆ ಮಾತ್ರ. ಪರಿಸ್ಥಿತಿ ಹೀಗಿರುವಾಗ ಬೂಸ್ಟರ್ ಕೊಡಬೇಕೆನ್ನುವುದು ನೈತಿಕವಾಗಿ ತಪ್ಪಾಗುತ್ತದೆ” ಎಂದು ಹೇಳುತ್ತಾರೆ.
ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕೆ?
ಕೊರೊನಾ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಜನರು ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಆಡಳಿಯ ವರ್ಗದ ಜನರೇ ಸಾವಿರಾರು ಜನರು ಸೇರುವ ಸಭೆಯಲ್ಲಿ ಎಲ್ಲಾ ನಿರ್ಬಂಧಗಳನ್ನು ಮೀರಿ ಮಾಸ್ಕ್ ಇಲ್ಲದೆ ಭಾಗವಹಿಸುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಬೆಂಗಳೂರು ಬಿಟ್ಟರೆ ರಾಜ್ಯದ ಬೇರೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ. ಮಾಸ್ಕ್ ಹಾಕದೆ ತೆರಳಿದರೆ ದಂಡ ಕಟ್ಟಿಸಿಕೊಳ್ಳುತ್ತಿದ್ದ ಪೊಲೀಸರು ಕೂಡಾ ಮಾಸ್ಕ್ ಇಲ್ಲದೆ ಓಡಾಡುವುದನ್ನು ನೋಡಿದ್ದೇವೆ. ಆದರೆ ತಜ್ಞರು ಹೇಳುವ ಪ್ರಕಾರ ಮಾಸ್ಕ್ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾದ ಅಂಶವಾಗಿದೆ.
ಅಮೆರಿಕದಂತಹ ದೇಶಗಳು ಎರಡು ಡೋಸ್ ಆದವರಿಗೆ ಮಾಸ್ಕ್ ಕಡ್ಡಾಯ ಎಂಬ ನಿರ್ಬಂಧವನ್ನು ತೆಗೆದುಹಾಕಿತ್ತು. ಆದರೆ ಈಗ ಅಲ್ಲಿ ಮತ್ತೆ ಕೊರೊನಾ ಹೆಚ್ಚಾದ ಕಾರಣ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. “ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡುವ ವೇಗ ಮತ್ತು ಪ್ರಮಾಣ ಕಡಿಮೆಯಾಗುತ್ತದೆ. ಕೊರೊನಾ ಬೆದರಿಕೆ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೂ ಮಾಸ್ಕ್ ಬೇಕೇಬೇಕಾಗುತ್ತದೆ” ಎಂಬುದು ಡಾ. ಹಿಮಾಂಶು ಅವರ ಅಭಿಪ್ರಾಯವಾಗಿದೆ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.